- ಬೆಂಗಳೂರಿನಲ್ಲಿ ನಡೆದ ಕೆಐಎಸ್‌ಎ (KISA) ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ 105 ಶಾಲೆಗಳನ್ನು ಹಿಂದಿಕ್ಕಿ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದಿದ್ದಾರೆ.
ಬೆಂಗಳೂರು (kannadapost.com): ಕರ್ನಾಟಕ ಐಸಿಎಸ್‌ಇ (ICSE) ಶಾಲೆಗಳ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಗಳಿಸಿದ್ದಾರೆ.
ಆಗಸ್ಟ್ 22ರಂದು ನಗರದ ಕ್ರೈಸ್ಟ್ ಅಕಾಡೆಮಿ ಶಾಲೆಯಲ್ಲಿ ಜರುಗಿದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳ ಒಟ್ಟು 105 ಶಾಲೆಗಳು ಪಾಲ್ಗೊಂಡಿದ್ದವು. ತೀವ್ರ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಸ್ಕಾಲರ್ಸ್ ಇಂಟರ್‌ನ್ಯಾಷನಲ್ ಶಾಲೆಯ 9 ಮತ್ತು 10ನೇ ತರಗತಿಯ ಬಾಲಕಿಯರ (ಜೂನಿಯರ್) ತಂಡವು 100ಕ್ಕೆ 98 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಬಹುಮಾನಕ್ಕೆ ಭಾಜನವಾಗಿದೆ.
ವಿದ್ಯಾರ್ಥಿನಿಯರ ಸಂಘಟಿತ ಕಲಾ ಪ್ರದರ್ಶನ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಆಡಳಿತಾಧಿಕಾರಿ ಡಾ. ಎಚ್.ಎನ್. ಚಂದ್ರಶೇಖರ್, “ವಿದ್ಯಾರ್ಥಿನಿಯರ ನಿರಂತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಈ ಯಶಸ್ಸಿನ ಪಯಣ ಭವಿಷ್ಯದಲ್ಲೂ ಮುಂದುವರಿಯಲಿ” ಎಂದು ಶುಭಕೋರಿದ್ದಾರೆ. ಶಾಲೆಯ ಕಲಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಿಭಾಗದ ಈ ಮೈಲಿಗಲ್ಲನ್ನು ಕಾರ್ಯದರ್ಶಿ ಮಮತಾ ಚಂದ್ರಶೇಖರ್ ಶ್ಲಾಘಿಸಿದ್ದು, ಮಾರ್ಗದರ್ಶನ ನೀಡಿದ ಶಿಕ್ಷಕ ವೃಂದ ಹಾಗೂ ಪೋಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.












