ಹಾಸನ (kannadapost.com): ಗ್ರಾಮ ಪಂಚಾಯಿತಿ ಚುನಾವಣೆಯ ಮೀಸಲಾತಿ ಪಟ್ಟಿ ವಿಚಾರವಾಗಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ವಿರುದ್ಧ ಜೆಡಿಎಸ್ ನಾಯಕರು ಮಾಡುತ್ತಿರುವ ಆರೋಪಗಳಿಗೆ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ. ಅಲ್ಲದೆ, ಸಂಸದ ಶ್ರೇಯಸ್ ಪಟೇಲ್ ಜೊತೆಗಿನ ಒಡನಾಟ ಹಾಗೂ ನೈಸ್ ರಸ್ತೆ ಟೋಲ್ ವಿಚಾರವಾಗಿಯೂ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವಿವಿಧ ರಾಜಕೀಯ ಬೆಳವಣಿಗೆಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯಿಸಿದರು.
’ಜೆಡಿಎಸ್ ವಕ್ತಾರನಾಗಲು ನಾನು ತಯಾರಿಲ್ಲ’
ಗ್ರಾ.ಪಂ ಮೀಸಲಾತಿ ಪಟ್ಟಿಯಲ್ಲಿ ಅನ್ಯಾಯವಾಗಿದೆ ಎಂಬ ಜೆಡಿಎಸ್ ಶಾಸಕರ ಆರೋಪದ ಬಗ್ಗೆ ಮಾತನಾಡಿದ ಪ್ರೀತಮ್ ಗೌಡ, “ಮೀಸಲಾತಿ ವಿಚಾರದಲ್ಲಿ ಯಾರಿಗೆ ಅನುಕೂಲವಾಗುತ್ತದೆಯೋ ಅವರಿಗೆ ಅದು ಸರಿಯೆನಿಸುತ್ತದೆ, ಅನಾನುಕೂಲವಾದವರಿಗೆ ಸಮಸ್ಯೆ ಎನಿಸುತ್ತದೆ. ಇದು ನನ್ನನ್ನೂ ಸೇರಿ ಎಲ್ಲಾ ರಾಜಕಾರಣಿಗಳಿಗೂ ಅನ್ವಯಿಸುತ್ತದೆ. ಹೀಗಾಗಿ ಇದಕ್ಕೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ,” ಎಂದರು.
”ಲೋಪದೋಷಗಳಿದ್ದರೆ ಕಾನೂನಿದೆ, ಕೋರ್ಟ್‌ಗೆ ಹೋದರೆ ಒಂದು ನಿಮಿಷಕ್ಕೆ ಸ್ಟೇ ಸಿಗುತ್ತದೆ. ಕಾನೂನು ಪ್ರಕಾರ ಇಲ್ಲ ಎಂದರೆ ನ್ಯಾಯಾಲಯಕ್ಕೆ ಹೋಗಲು ಮುಕ್ತ ಅವಕಾಶವಿದೆ. ನಾನು ಜೆಡಿಎಸ್ ವಕ್ತಾರನಾಗಲು ತಯಾರಿಲ್ಲ. ಅವರಿಗೆ ಸಮಸ್ಯೆ ಇದೆ, ಅದನ್ನು ಹೇಳಿಕೊಂಡಿದ್ದಾರೆ. ಆದರೆ, ಯಾವುದೇ ಕೆಟಗರಿಗೆ ಮೀಸಲಾತಿ ಬದಲಾದರೂ, ಆ ವರ್ಗದ ನಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು,” ಎಂದು ಸಲಹೆ ನೀಡಿದರು.
’ಅದೇ ಪ್ರೀತಮ್ ಗೌಡನ ಶಕ್ತಿ’
ಸಂಸದ ಶ್ರೇಯಸ್ ಪಟೇಲ್ ಅವರೊಂದಿಗೆ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಹಾಗೂ ಪರಸ್ಪರ ಹೊಗಳಿಕೊಳ್ಳುತ್ತಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮ ಸ್ಥಳೀಯ ಶಾಸಕರನ್ನು (ಸ್ವರೂಪ್) ಪಕ್ಕದಲ್ಲಿ ಕೂರಿಸಿಕೊಂಡು ನಾವಿಬ್ಬರೂ ಚೆನ್ನಾಗಿದ್ದೇವೆ ಎಂದು ಎಂಪಿ ಅವರು ಹೇಳಿದಾಗ ಅದಕ್ಕೆ ಪ್ರಾಮುಖ್ಯತೆ ಸಿಗುವುದಿಲ್ಲ. ಅವರಿಬ್ಬರೂ ಗಣಪತಿ ಉತ್ಸವದಲ್ಲಿ ಒಟ್ಟಿಗೆ ಕೈ-ಕೈ ಹಿಡಿದುಕೊಂಡು ಓಡಾಡುತ್ತಾರೆ, ಆಗ ಯಾರೂ ಮಾತನಾಡುವುದಿಲ್ಲ,” ಎಂದು ಪರೋಕ್ಷವಾಗಿ ಶಾಸಕ ಸ್ವರೂಪ್ ಹಾಗೂ ಸಂಸದರ ಒಡನಾಟವನ್ನು ಪ್ರಸ್ತಾಪಿಸಿದರು.
”ಆದರೆ ಪ್ರೀತಮ್ ಗೌಡ ಕೂತರೂ ಸುದ್ದಿ, ನಿಂತರೂ ಸುದ್ದಿ, ಕಾರ್ಯಕ್ರಮಕ್ಕೆ ಬರಲಿಲ್ಲ ಎಂದರೂ ಸುದ್ದಿ. ಅದು ಪ್ರೀತಮ್ ಗೌಡನ ಶಕ್ತಿ, ಹಾಗಾಗಿ ಏನೂ ಮಾಡಲು ಆಗಲ್ಲ,” ಎಂದರು.
ನೈಸ್ ರಸ್ತೆ ಟೋಲ್ ವಿಚಾರದಲ್ಲಿ ಜಾಣ್ಮೆಯ ಉತ್ತರ
’ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಬೇಡಿ’ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಆ ವಿಚಾರದ ಬಗ್ಗೆ ನನಗೆ ತಾಂತ್ರಿಕ (Technicality) ಮಾಹಿತಿ ಇಲ್ಲ. ನಾನು ಹಾಸನದವನು, ಈ ಭಾಗದಲ್ಲಿ ಇರುವುದರಿಂದ ಆ ಭಾಗದ ಬಗ್ಗೆ ಮಾಹಿತಿ ಕಡಿಮೆ ಇದೆ. ವಿಚಾರ ತಿಳಿದುಕೊಂಡು ಮಾತನಾಡುತ್ತೇನೆ. ಆದಾಗ್ಯೂ, ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದರೆ ಖಂಡಿತ ಅದರಲ್ಲಿ ಸತ್ಯಾಸತ್ಯತೆ ಇರುತ್ತದೆ,” ಎಂದು ಹೇಳುವ ಮೂಲಕ ಅಳೆದೂ ತೂಗಿ ಪ್ರತಿಕ್ರಿಯೆ ನೀಡಿದರು.












