ಹಾಸನ (kannadapost.com): ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶವಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ, “ಕಾನೂನಿಗಿಂತ ಯಾರೂ ದೊಡ್ಡವರಲ್ಲ, ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದಡಿ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯವು ಇತ್ತೀಚೆಗಷ್ಟೇ ಆದೇಶ ಹೊರಡಿಸಿರುವ ವಿಚಾರವಾಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಮೇಲಿನ ಆರೋಪಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
’ನಾನು ಮೂಲತಃ ಉದ್ಯಮಿ’
ತಮ್ಮ ಆಸ್ತಿ ಗಳಿಕೆಯ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ನಾನು ಮೂಲತಃ ಒಬ್ಬ ಬ್ಯುಸಿನೆಸ್ ಮ್ಯಾನ್ (ಉದ್ಯಮಿ), ಆ ಬಳಿಕ ರಾಜಕಾರಣಕ್ಕೆ ಬಂದವನು. ನಾವು ಉದ್ಯಮ ಮಾಡುತ್ತಿದ್ದ ದಿನಗಳಲ್ಲಿ ಹಲವರಿಗೆ ಪ್ರೀತಮ್ ಗೌಡರ ಹಿನ್ನೆಲೆ ಗೊತ್ತಿರಲಿಲ್ಲ. ಹಾಗಾಗಿ ನನ್ನ ಆಸ್ತಿ-ಪಾಸ್ತಿಯ ಬಗ್ಗೆ ಕೆಲವರಿಗೆ ಸಹಜವಾಗಿ ಸಂದೇಹಗಳಿರುತ್ತವೆ. ಈ ತನಿಖೆಯ ಮೂಲಕ ಆ ಎಲ್ಲಾ ಸಂದೇಹಗಳು ಬಗೆಹರಿಯಲಿವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕಾರಣ ಬೆರೆಸುವುದಿಲ್ಲ
ತಮ್ಮ ಮೇಲಿನ ಆರೋಪಗಳ ಹಿಂದೆ ಯಾವುದೇ ರಾಜಕೀಯ ಷಡ್ಯಂತ್ರವಿದೆಯೇ ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಿದ ಅವರು, “ನಾನು ಎಲ್ಲದಕ್ಕೂ ರಾಜಕಾರಣವನ್ನು ಎಳೆದು ತರುವ ಕೆಲಸ ಮಾಡುವುದಿಲ್ಲ. ನಾನು ಪ್ರಾಮಾಣಿಕವಾಗಿದ್ದರೆ, ಬೇರೆ ಯಾವುದರ ಬಗ್ಗೆಯೂ ಚಿಂತೆ ಮಾಡುವ ಅಗತ್ಯವಿಲ್ಲ ಮತ್ತು ಯಾವುದಕ್ಕೂ ಧೃತಿಗೆಡಬಾರದು,” ಎಂದರು.
ತನಿಖಾ ಸಂಸ್ಥೆಗಳ ಮೇಲಿನ ಗೌರವವನ್ನು ವ್ಯಕ್ತಪಡಿಸಿದ ಪ್ರೀತಮ್ ಗೌಡ, “ಅವರು (ಲೋಕಾಯುಕ್ತ ಅಧಿಕಾರಿಗಳು) ಏನೇನು ವಿಚಾರ ಕೇಳುತ್ತಾರೋ, ಅದಕ್ಕೆ ಎಲ್ಲಾ ರೀತಿಯ ಸಹಕಾರವನ್ನು ಕೊಡುವುದು ನನ್ನ ಜವಾಬ್ದಾರಿ. ಕಾನೂನು ಪ್ರಕಾರ ಏನೇನು ಪ್ರಕ್ರಿಯೆಗಳು ನಡೆಯಬೇಕೋ ಅದಕ್ಕೆ ನಾನು ಬದ್ಧನಾಗಿದ್ದು, ನನ್ನ ಜವಾಬ್ದಾರಿಯನ್ನು ನಿರ್ವಹಿಸುವ ಕೆಲಸವನ್ನು ಮಾಡುತ್ತೇನೆ,” ಎಂದು ತಿಳಿಸಿದ್ದಾರೆ.











