ಹಾಸನ (kannadapost.com): ಹಾಸನ ಜಿಲ್ಲಾಡಳಿತದ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡಲಾಗುವ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನಕ್ಕೆ ಈ ಬಾರಿ ಪತ್ರಿಕಾ ರಂಗದ ಹಿರಿಯ ಪತ್ರಕರ್ತರಾದ ಪ್ರತಾಪ್ ಜಿ.ಹಿರೀಸಾವೆ ಹಾಗೂ ಭಾರತಿ ಕೆ. ಅವರು ಭಾಜನರಾಗಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್ 15ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರನ್ನು ಜಿಲ್ಲಾಡಳಿತವು ಅಭಿನಂದಿಸಿ ಗೌರವಿಸಲಿದೆ. ಅದರಂತೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸುದೀರ್ಘ ಹಾಗೂ ನಿರಂತರ ಸೇವೆಗಾಗಿ ಈ ಇಬ್ಬರು ಪತ್ರಕರ್ತರನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಸಾಧಕರ ಪರಿಚಯ:
- ಪ್ರತಾಪ್ ಜಿ.ಹಿರೀಸಾವೆ: ಇವರು ಕಳೆದ ಒಂದೂವರೆ ದಶಕದಿಂದಲೂ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳೆರಡರಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ವರದಿಗಾರಿಕೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
- ಭಾರತಿ ಕೆ.: ಇವರು ‘ಪ್ರಜೋದಯ’ ದಿನಪತ್ರಿಕೆಯಲ್ಲಿ ಕಳೆದ 22 ವರ್ಷಗಳಿಂದ ಉಪ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪತ್ರಿಕಾ ರಂಗದಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ.
ಪತ್ರಕರ್ತರ ಸಂಘದಿಂದ ಹರ್ಷ: ಜಿಲ್ಲಾಡಳಿತದ ಸನ್ಮಾನಕ್ಕೆ ಆಯ್ಕೆಯಾಗಿರುವ ಈ ಇಬ್ಬರು ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ತೀವ್ರ ಹರ್ಷ ವ್ಯಕ್ತಪಡಿಸಿದೆ.
ಸಂಘದ ರಾಜ್ಯ ಉಪಾಧ್ಯಕ್ಷರಾದ ಹೆಚ್.ಬಿ.ಮದನಗೌಡ, ಹಾಸನ ಜಿಲ್ಲಾಧ್ಯಕ್ಷರಾದ ಜೆ.ಆರ್.ಕೆಂಚೇಗೌಡ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಪಿ.ಎಸ್.ಪ್ರಮೋದ್, ಸಂಘದ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ರಾಷ್ಟ್ರೀಯ ಮಂಡಳಿ ಸದಸ್ಯರು ಹಾಗೂ ಸರ್ವ ಸದಸ್ಯರು ಸನ್ಮಾನಿತರಿಗೆ ಹಾರ್ದಿಕವಾಗಿ ಅಭಿನಂದಿಸಿದ್ದಾರೆ ಎಂದು ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












