- ನವದೆಹಲಿಯಲ್ಲಿ ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾದ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಕ್ಷಣವೇ ತಜ್ಞರ ತಂಡ ಕಳುಹಿಸುವಂತೆ ಮನವಿ ಸಲ್ಲಿಸಿದರು.
ನವದೆಹಲಿ/ಹಾಸನ: ಹಾಸನ ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿರುವ ಮಾನವ–ಆನೆ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸಿರುವ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು, ನವದೆಹಲಿಯಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಅವರನ್ನು ಖುದ್ದಾಗಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿ ಮನವಿ ಪತ್ರ ಸಲ್ಲಿಸಿದ್ದಾರೆ.
ಹಾಸನದ ಮಲೆನಾಡು ಹಾಗೂ ಅರೆಮಲೆನಾಡು ಭಾಗದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಾಡಾನೆಗಳ ಉಪಟಳಕ್ಕೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
80ಕ್ಕೂ ಹೆಚ್ಚು ಅಮೂಲ್ಯ ಜೀವ ಬಲಿ
ಹಾಸನ ಜಿಲ್ಲೆಯ ಅರಣ್ಯ ಗಡಿ ದಾಟಿ ಬಂದು ಕಾಫಿ ತೋಟಗಳು ಹಾಗೂ ಕೃಷಿ ಭೂಮಿಗಳಲ್ಲಿ ಪ್ರಸ್ತುತ 90ಕ್ಕೂ ಹೆಚ್ಚು ಕಾಡಾನೆಗಳು ಸಂಚರಿಸುತ್ತಿವೆ. ಆನೆಗಳ ನಿರಂತರ ದಾಳಿಯಿಂದಾಗಿ ಇದುವರೆಗೆ 80ಕ್ಕೂ ಹೆಚ್ಚು ಮಾನವ ಜೀವಗಳು ಬಲಿಯಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ನಿರಂತರ ಬೆಳೆ ನಷ್ಟ ಮತ್ತು ಆಸ್ತಿ ಹಾನಿಯಿಂದಾಗಿ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ತೀವ್ರ ಭೀತಿಯ ವಾತಾವರಣದಲ್ಲಿ ದಿನದೂಡುವಂತಾಗಿದೆ.
ಭರವಸೆ ನೀಡಿದ್ದ ಕೇಂದ್ರ, ವಿಳಂಬವಿಲ್ಲದೆ ತಂಡ ನಿಯೋಜನೆಗೆ ಒತ್ತಾಯ
ಈ ಹಿಂದೆ ಈ ವಿಚಾರವನ್ನು ಕೇಂದ್ರ ಸಚಿವರ ಗಮನಕ್ಕೆ ತಂದಾಗ, DGF (ವೈಲ್ಡ್‌ಲೈಫ್) ಅವರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಜೊತೆಗೆ ಹಾಸನಕ್ಕೆ ವಿಶೇಷ ತಜ್ಞರ ತಂಡವನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸುವ ಭರವಸೆಯನ್ನು ನೀಡಲಾಗಿತ್ತು.
ಪ್ರಸ್ತುತ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿರುವುದರಿಂದ, ಭರವಸೆ ನೀಡಿರುವ ತಜ್ಞರ ತಂಡದ ಭೇಟಿಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ತಕ್ಷಣವೇ ಆಯೋಜಿಸಬೇಕು ಎಂದು ದೆಹಲಿ ಭೇಟಿಯ ವೇಳೆ ಸಂಸದ ಶ್ರೇಯಸ್ ಪಟೇಲ್ ಒತ್ತಾಯಿಸಿದರು.
ತಜ್ಞರ ತಂಡದ ರೂಪುರೇಷೆ ಹೇಗಿರಬೇಕು?
ಸಚಿವರ ಮುಂದೆ ಸಂಸದರು ಪ್ರಮುಖ ಬೇಡಿಕೆಗಳನ್ನು ಇರಿಸಿದ್ದಾರೆ:
- ಭೇಟಿ ನೀಡುವ ತಂಡದಲ್ಲಿ ಹಿರಿಯ ಅರಣ್ಯ ಅಧಿಕಾರಿಗಳ ಜೊತೆಗೆ ಅನುಭವಿ ಆನೆ ತಜ್ಞರು, ವನ್ಯಜೀವಿ ತಜ್ಞರು ಮತ್ತು ವಿಜ್ಞಾನಿಗಳನ್ನು ಒಳಗೊಂಡಿರಬೇಕು.
- ತಂಡವು ಹಾಸನದ ಕಾಡಾನೆ ಬಾಧಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಬೇಕು.
- ಸ್ಥಳೀಯ ರೈತರು ಹಾಗೂ ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ನೆಲಮಟ್ಟದ ವಾಸ್ತವಾಂಶಗಳನ್ನು ಆಧರಿಸಿ ವೈಜ್ಞಾನಿಕ ಹಾಗೂ ಶಾಶ್ವತ ಪರಿಹಾರ ಯೋಜನೆ ರೂಪಿಸಬೇಕು.
“ಹಾಸನ ಜಿಲ್ಲೆಯ ಜನರು ಈಗಾಗಲೇ ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದಾರೆ. ಮತ್ತಷ್ಟು ಜೀವಹಾನಿ ಸಂಭವಿಸುವ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ತುರ್ತು ಕ್ರಮ ಕೈಗೊಳ್ಳಬೇಕು. DGF (Wildlife) ಅವರಿಂದ ತಂಡ ಭೇಟಿ ನೀಡುವ ಭರವಸೆ ಈಗಾಗಲೇ ದೊರೆತಿದೆ. ಇನ್ನು ಅಗತ್ಯವಿರುವುದು ನೆಲಮಟ್ಟದಲ್ಲಿ ತ್ವರಿತ ಮತ್ತು ಸಮನ್ವಯಿತ ಕ್ರಮ.”
–ಶ್ರೇಯಸ್ ಎಂ.ಪಟೇಲ್, ಸಂಸದ
ಹಾಸನ ಜಿಲ್ಲೆಯ ಜನರ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸಲು ಕೇಂದ್ರ ಹಾಗೂ ಕರ್ನಾಟಕ ಸರ್ಕಾರಗಳು ಶೀಘ್ರವಾಗಿ ಸಮನ್ವಯ ಸಾಧಿಸಿ, ತಜ್ಞರ ತಂಡದ ಭೇಟಿಯನ್ನು ಆದಷ್ಟು ಬೇಗ ಖಚಿತಪಡಿಸಬೇಕು ಎಂದು ಕೇಂದ್ರ ಸಚಿವರಿಗೆ ನೀಡಿದ ಮನವಿಯಲ್ಲಿ ಕೋರಲಾಗಿದೆ.












