27.2 C
Munich
Home News ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ: ತನಿಖೆಗೆ ವಿಶೇಷ ತಂಡ ರಚನೆ

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ: ತನಿಖೆಗೆ ವಿಶೇಷ ತಂಡ ರಚನೆ

ಬೆಂಗಳೂರು, ಆ. 13, 2026 (kannadapost.com): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಅಧಿಕಾರಿಗಳ ದಿಢೀರ್ ತಪಾಸಣೆ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ರಚಿಸಲಾಗಿದೆ.

ಜೈಲಿನಲ್ಲಿ ಮೊಬೈಲ್ ಪತ್ತೆಯಾಗಿರುವುದು ಹಾಗೂ ಜೈಲು ಅಧಿಕಾರಿಗಳ ನಿರ್ಲಕ್ಷ್ಯದ ಆರೋಪಗಳ ಹಿನ್ನೆಲೆಯಲ್ಲಿ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಜೈಲಿನೊಳಗೆ ಮೊಬೈಲ್ ಹೇಗೆ ಬಂತು?

ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್‌ನೊಳಗೆ ಮೊಬೈಲ್ ಫೋನ್ ಹೇಗೆ ಪ್ರವೇಶಿಸಿತು? ಅದನ್ನು ಯಾರು ತಂದರು? ಎಷ್ಟು ದಿನಗಳಿಂದ ಬಳಕೆಯಲ್ಲಿತ್ತು? ಎಂಬುದೂ ಸೇರಿದಂತೆ ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆ ನಡೆಸುವಂತೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದಾರೆ.

ಜೈಲಿನ ಭದ್ರತಾ ವ್ಯವಸ್ಥೆ, ಕೈದಿಗಳಿಗೆ ನಿಷೇಧಿತ ವಸ್ತುಗಳ ಪ್ರವೇಶ ಹಾಗೂ ಕರ್ತವ್ಯದಲ್ಲಿದ್ದ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಕೂಡ ತನಿಖೆ ನಡೆಯಲಿದೆ.

ಜೈಲಿನೊಳಗೆ ಆಂಧ್ರದ ಏರ್‌ಟೆಲ್ ಸಿಮ್!

ಈ ಕುರಿತು ಮಾತನಾಡಿರುವ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್, ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಜಾಮರ್‌ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಾಮರ್‌ನಿಂದಾಗಿ ಜೈಲಿನ ಸುತ್ತಮುತ್ತಲಿನ ಸ್ಥಳೀಯರಿಗೂ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಜೈಲಿನೊಳಗೆ ಏರ್‌ಟೆಲ್ ಸಿಮ್‌ಗಳು ಬಳಕೆಯಾಗುತ್ತಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಅದರಲ್ಲೂ ಆಂಧ್ರಪ್ರದೇಶದ ಏರ್‌ಟೆಲ್ ಸಿಮ್‌ಗಳು ಪತ್ತೆಯಾಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತು ಜೈಲು ಅಧಿಕಾರಿಗಳಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಿಮ್‌ಗಳು ಪತ್ತೆಯಾಗುತ್ತಿವೆ. ಹೀಗಾಗಿ ಸಂಪೂರ್ಣ ವಿಚಾರದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ಜೈಲು ಭದ್ರತೆ ಕುರಿತು ಮತ್ತಷ್ಟು ಪ್ರಶ್ನೆ

ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾಗಿರುವುದು ಪರಪ್ಪನ ಅಗ್ರಹಾರ ಜೈಲಿನ ಭದ್ರತಾ ವ್ಯವಸ್ಥೆ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತನಿಖಾ ತಂಡದ ವರದಿಯ ಬಳಿಕ ಮೊಬೈಲ್ ಜೈಲಿನೊಳಗೆ ಪ್ರವೇಶಿಸಿದ ರೀತಿ ಹಾಗೂ ಇದರಲ್ಲಿ ಯಾರಾದರೂ ಕರ್ತವ್ಯಲೋಪ ಎಸಗಿದ್ದಾರೆಯೇ ಎಂಬುದು ಸ್ಪಷ್ಟವಾಗುವ ನಿರೀಕ್ಷೆಯಿದೆ.

error: Content is protected !!