ಹಾಸನ: ಚೌಲಗೆರೆ ಟೋಲ್ ಸಿಬ್ಬಂದಿಗೆ ಗನ್, ಲಾಂಗ್ ತೋರಿಸಿ ಪುಂಡರ ಬೆದರಿಕೆ | Hassan Crime News

ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಚೌಲಗೆರೆ ಟೋಲ್ ಬಳಿ ಸುಂಕ (Toll fee) ಕೇಳಿದ್ದಕ್ಕೆ ಕಾರಿನಲ್ಲಿ ಬಂದಿದ್ದ ಯುವಕರು ಟೋಲ್ ಸಿಬ್ಬಂದಿಗೆ ಗನ್ ಮತ್ತು ಲಾಂಗ್ ತೋರಿಸಿ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.

​ಸುಂಕ ಕಟ್ಟಲು ನಿರಾಕರಿಸಿ ವಾಗ್ವಾದ

​ಮಾರುತಿ 800 ಕಾರಿನಲ್ಲಿ ಐವರು ಯುವಕರು ಟೋಲ್ ಬಳಿ ಬಂದಿದ್ದಾರೆ. ನಿಯಮದಂತೆ ಟೋಲ್ ಸಿಬ್ಬಂದಿ ಬ್ಯಾರಿಯರ್ ಹಾಕಿ ಸುಂಕದ ಹಣ ಪಾವತಿಸುವಂತೆ ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕರು, ಕೂಡಲೇ ಕಾರಿನಿಂದ ಕೆಳಗಿಳಿದು ಟೋಲ್ ಸಿಬ್ಬಂದಿಗಳಿಗೆ ಅವಾಜ್ ಹಾಕಿದ್ದಾರೆ.

​ಸುಂಕ ಕಟ್ಟುವುದಿಲ್ಲ, ತಕ್ಷಣ ಬ್ಯಾರಿಯರ್ ತೆಗೆಯುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಿಬ್ಬಂದಿ ಜೊತೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ.

​ಗನ್, ಲಾಂಗ್ ಪ್ರದರ್ಶನ; ಬ್ಯಾರಿಯರ್‌ಗೆ ಗುದ್ದಿ ಎಸ್ಕೇಪ್

​ಯುವಕರು ಮತ್ತು ಸಿಬ್ಬಂದಿ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗುತ್ತಿದ್ದಂತೆ, ಪುಂಡರು ಏಕಾಏಕಿ ಟೋಲ್ ಸಿಬ್ಬಂದಿಗೆ ಗನ್ ಹಾಗೂ ಲಾಂಗ್ ತೋರಿಸಿ ಬೆದರಿಸಿದ್ದಾರೆ. ಮಾರಕಾಸ್ತ್ರ ಮತ್ತು ಗನ್ ಕಂಡು ಟೋಲ್ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಇದೇ ವೇಳೆ ಟೋಲ್ ಹಣ ನೀಡದೆ ಬ್ಯಾರಿಯರ್‌ಗೆ ಕಾರನ್ನು ಗುದ್ದಿಕೊಂಡು ಯುವಕರು ಪರಾರಿಯಾಗಿದ್ದಾರೆ.

​ಪೊಲೀಸರ ಭೇಟಿ, ಪರಿಶೀಲನೆ

​ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

​ಪರಾರಿಯಾಗಿರುವ ಪುಂಡರ ಗುರುತು ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳು ಪ್ರದರ್ಶಿಸಿದ ಗನ್ ಅಸಲಿಯೇ ಅಥವಾ ನಕಲಿಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.