​’ಇದು ದಪ್ಪ ಚರ್ಮದ ಸರ್ಕಾರ’ ಕೇಂದ್ರದ ವಿರುದ್ಧ ಸಂಸದ ಶ್ರೇಯಸ್ ಪಟೇಲ್ ವಾಗ್ದಾಳಿ

ಹಾಸನ (kannadapost.com): ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಅವರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ, ಹಾಸನ ಲೋಕಸಭಾ ಸಂಸದ ಶ್ರೇಯಸ್ ಪಟೇಲ್ Shreyas patel ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂಬುದಕ್ಕೆ ವಿದ್ಯಾರ್ಥಿಗಳ ಬೀದಿ ಹೋರಾಟವೇ ದೊಡ್ಡ ಸಾಕ್ಷಿಯಾಗಿದೆ ಎಂದು ಹರಿಹಾಯ್ದರು.

ವಿದ್ಯಾರ್ಥಿಗಳ ದಾರುಣ ಸ್ಥಿತಿ

​”ದೆಹಲಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅತ್ಯಂತ ಧಾರುಣ ಸ್ಥಿತಿಯಲ್ಲಿದ್ದಾರೆ. ರಸ್ತೆ ಬದಿಯಲ್ಲೇ ಊಟ ಮಾಡಿ, ಅಲ್ಲೇ ಮಲಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಪೊಲೀಸರು ಅವಮಾನ ಮಾಡಿ, ಹಲ್ಲೆ ನಡೆಸಿದ್ದಾರೆ. ಇಷ್ಟಾದರೂ ಈ ದಪ್ಪ ಚರ್ಮದ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ,” ಎಂದು ಅವರು ಕಿಡಿಕಾರಿದರು. ಈ ಇಡೀ ಪ್ರಕರಣದ ಬಗ್ಗೆ ಪ್ರಾಮಾಣಿಕ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.

ಸಂಸದರ ಪ್ರಮುಖ ಆರೋಪಗಳು:

  • ಸಂಸದರಿಗೂ ಅವಮಾನ: “ಮಹಿಳಾ ಸಂಸದರು ಎನ್ನುವುದನ್ನೂ ಲೆಕ್ಕಿಸದೆ ಅತ್ಯಂತ ಕೀಳಾಗಿ ನಡೆಸಿಕೊಳ್ಳಲಾಗಿದೆ. ನಮ್ಮನ್ನೆಲ್ಲಾ ಸ್ಟೇಡಿಯಂನಲ್ಲಿ ಕೂಡಿ ಹಾಕಲಾಗಿತ್ತು.”
  • ರಾಜೀನಾಮೆಗೆ ಸವಾಲು: “ಅಚ್ಛೇ ದಿನ್ ಆಯೇಗಾ ಎಂದು ಹೇಳಿದ್ದರು, ಆದರೆ ಎಲ್ಲಿ ಒಳ್ಳೆಯ ದಿನಗಳು ಬಂದಿವೆ? ವಿದ್ಯಾರ್ಥಿಗಳು ಬೀದಿ ಪಾಲಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮಾನ-ಮರ್ಯಾದೆ ಎನ್ನುವುದು ಇದ್ದರೆ ಕೂಡಲೇ ರಾಜೀನಾಮೆ ನೀಡಿ ಜನರ ಮುಂದೆ ಬರಲಿ.”
  • ಫಾಸ್ಟ್ ಟ್ರ್ಯಾಕ್ ಕೋರ್ಟ್ ಕೇವಲ ನಾಮಕಾವಸ್ತೆ: “ಫಾಸ್ಟ್ ಟ್ರ್ಯಾಕ್ ಕೋರ್ಟ್ ತೆರೆಯುವುದು ಸರ್ಕಾರದ ಕರ್ತವ್ಯ. ಆದರೆ, ಆ ಕೋರ್ಟ್‌ಗಳ ಮೂಲಕ ಇದುವರೆಗೆ ಎಷ್ಟು ಜನರಿಗೆ ಶಿಕ್ಷೆಯಾಗಿದೆ ಎಂಬುದರ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಲಿ.”

ರಾಹುಲ್ ಗಾಂಧಿ ಬೆಂಬಲಕ್ಕೆ ನಿಲ್ಲುವ ಶಪಥ

​ಕೇಂದ್ರ ಸರ್ಕಾರದ ಈ ನಡೆಯ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ ಶ್ರೇಯಸ್ ಪಟೇಲ್, “ಏನೇ ಆದರೂ ನಾವು ರಾಹುಲ್ ಗಾಂಧಿ ಅವರ ಜೊತೆ ನಿಂತು ಹೋರಾಡುತ್ತೇವೆ. ಇಂದಿನ ಪರಿಸ್ಥಿತಿಯಲ್ಲಿ ಈ ದೇಶಕ್ಕೆ ರಾಹುಲ್ ಗಾಂಧಿ ಅವರ ನೇತೃತ್ವದ ಅತ್ಯಗತ್ಯವಿದೆ,” ಎಂದು ಘೋಷಿಸಿದರು.