ಬೆಂಗಳೂರು, ಜು.21 (www.kannadapost.com): ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಕರಾವಳಿ’ ಸಿನಿಮಾ ಇದೇ ಜುಲೈ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಆಯೋಜಿಸಿರುವ ಪ್ರಿಮಿಯರ್ ಶೋಗಳಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಿತ್ರತಂಡ ಮಂಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು ಹಾಗೂ ಬೆಂಗಳೂರಿನಲ್ಲಿ ವಿಶೇಷ ಪ್ರಿಮಿಯರ್ ಪ್ರದರ್ಶನಗಳನ್ನು ಆಯೋಜಿಸಿದೆ. ಈಗಾಗಲೇ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ನಡೆದ ಪ್ರದರ್ಶನಗಳು ಪ್ರೇಕ್ಷಕರ ಮನಗೆದ್ದಿದ್ದು, ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.
ಮಂಗಳೂರಿನ ಪ್ರೇಕ್ಷಕರು ಚಿತ್ರದ ಭಾವನಾತ್ಮಕ ಕಥಾಹಂದರಕ್ಕೆ ಮನಸೋತರೆ, ಶಿವಮೊಗ್ಗದ ಸಿನಿಪ್ರಿಯರು ಚಿತ್ರದ ನಿರೂಪಣೆ, ರೋಚಕ ದೃಶ್ಯಗಳು ಹಾಗೂ ಮನರಂಜನಾ ಅಂಶಗಳನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಮುಗಿದ ಬಳಿಕ ಅನೇಕರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಉತ್ತಮ ವಿಮರ್ಶೆಗಳು ವ್ಯಕ್ತವಾಗಿವೆ.
ವಿಶೇಷವಾಗಿ ಸಿನಿಮಾದ ಮಹಾಬಲ ಹಾಗೂ ಮಹಾವೀರ ಪಾತ್ರಗಳು ಪ್ರೇಕ್ಷಕರ ಮನಗೆದ್ದಿವೆ. ಈ ಎರಡೂ ಪಾತ್ರಗಳ ಅಭಿನಯ ಹಾಗೂ ಪಾತ್ರ ವಿನ್ಯಾಸಕ್ಕೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿವೆ.
ನಿರ್ದೇಶಕ ಗುರುದತ್ ಗಾಣಿಗ ಅವರ ಕಥೆ ಹೇಳುವ ಶೈಲಿ, ದೃಶ್ಯ ನಿರೂಪಣೆ ಹಾಗೂ ಕಲಾವಿದರಿಂದ ಅತ್ಯುತ್ತಮ ಅಭಿನಯ ಹೊರತೆಗೆಯುವ ಸಾಮರ್ಥ್ಯಕ್ಕೂ ಸಿನಿಪ್ರೇಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ನಾಯಕಿಯರಾಗಿ ಸಂಪದಾ ಹಾಗೂ ಸುಷ್ಮಿತಾ ಅಭಿನಯಿಸಿದ್ದಾರೆ. ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಗುರುದತ್ ಗಾಣಿಗ ಅವರ ನಿರ್ದೇಶನದೊಂದಿಗೆ ವಿಕೆ ಫಿಲ್ಮ್ ಅಸೋಸಿಯೇಷನ್ ಹಾಗೂ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ಪ್ರಿಮಿಯರ್ ಪ್ರದರ್ಶನಗಳ ಯಶಸ್ಸಿನಿಂದ ಚಿತ್ರತಂಡ ಉತ್ಸಾಹಗೊಂಡಿದ್ದು, ಇದೇ ಜುಲೈ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ‘ಕರಾವಳಿ’ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.











