- ಹಾಸನ (Kannada Post): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರೆಂಟಿ ಯೋಜನೆಗಳ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ಊಹಾಪೋಹಗಳಿಗೆ ಹಾಸನ ಸಂಸದ ಶ್ರೇಯಸ್ ಪಟೇಲ್ ತೆರೆ ಎಳೆದಿದ್ದಾರೆ. “ಗೃಹಲಕ್ಷ್ಮಿ ಸೇರಿದಂತೆ ಯಾವುದೇ ಯೋಜನೆಗಳು ನಿಲ್ಲುವುದಿಲ್ಲ, ಬಡವರಿಗೆ ಯಾವುದೇ ತೊಂದರೆಯಾಗುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಾಸನ (Hassan) ದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು. “ಮತದಾರರ ಪಟ್ಟಿಯನ್ನು (SIR) ಹೇಗೆ ಪರಿಷ್ಕರಣೆ ಮಾಡುತ್ತಾರೋ, ಅದೇ ರೀತಿ ಸರ್ಕಾರದ ಯೋಜನೆಗಳೂ ಕಾಲಕಾಲಕ್ಕೆ ಪರಿಷ್ಕರಣೆ ಆಗಬೇಕು. ಆ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಇದರಿಂದ ಬಡವರಿಗಾಗಲಿ, ಸಾಮಾನ್ಯ ವರ್ಗದವರಿಗಾಗಲಿ ಯಾವುದೇ ಸಮಸ್ಯೆ ಆಗಲ್ಲ. ಈಗೇನು ಹಣ ಬರುತ್ತಿದೆಯೋ, ಅದು ಮುಂದೆಯೂ ಎಲ್ಲರಿಗೂ ಬರಲಿದೆ” ಎಂದು ಭರವಸೆ ನೀಡಿದರು.
ಮಹಿಳೆಯರು ಅಲೆದಾಡುವಂತಿಲ್ಲ:
“ಮುಖ್ಯಮಂತ್ರಿಗಳು ಹೇಳಿರುವಂತೆ ಅರ್ಹರು ಮತ್ತೊಮ್ಮೆ ನೋಂದಣಿ (ರಿಜಿಸ್ಟರ್) ಮಾಡಿಕೊಳ್ಳಬೇಕು. ಆ ನಿಯಮವನ್ನು ಎಲ್ಲರೂ ಪಾಲಿಸಬೇಕು. ಇದಕ್ಕಾಗಿ ಮಹಿಳೆಯರು ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ. ಅವರು ಇದ್ದ ಕಡೆಯೇ ರಿಜಿಸ್ಟರ್ ಮಾಡುವ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತೆಗೆದುಕೊಂಡಿದೆ. ಸರಿಯಾದ ದಾಖಲೆಗಳನ್ನು ಕೊಟ್ಟರೆ ನೇರವಾಗಿ ಅವರ ಖಾತೆಗೆ ಹಣ ಜಮೆ ಆಗುತ್ತದೆ. ಗೃಹಲಕ್ಷ್ಮಿ ವಿಚಾರದಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ” ಎಂದು ಸಂಸದರು ತಿಳಿಸಿದರು.
ವಿಪಕ್ಷಗಳ ವಿರುದ್ಧ ವಾಗ್ದಾಳಿ:
“ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಾರೆಂದು ಗೃಹಲಕ್ಷ್ಮಿ ಹಣ ನಿಂತು ಹೋಗುತ್ತದೆ ಎಂದು ಮಹಿಳೆಯರು ಹೆದರುವುದು ಬೇಡ. ವಿರೋಧ ಪಕ್ಷದವರು ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಟ್ಟು, ಸರ್ಕಾರಕ್ಕೆ ಕೆಲಸ ಮಾಡಲು ಸಹಕಾರ ಕೊಡಬೇಕು. ನಮ್ಮ ಸರ್ಕಾರ ಬಡವರು, ದೀನ-ದಲಿತರಿಗೆ ಧ್ವನಿಯಾಗಿರುವ ಸರ್ಕಾರ. ಕಾಂಗ್ರೆಸ್ ಪಕ್ಷ ಬಡವರ ಕೈ ಹಿಡಿಯುತ್ತದೆಯೇ ಹೊರತು, ಬಡವರಿಗೆ ಕೈ ಕೊಡುವ ಪಕ್ಷವಲ್ಲ” ಎಂದು ಶ್ರೇಯಸ್ ಪಟೇಲ್ ತಿರುಗೇಟು ನೀಡಿದರು.
”ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಬಡವರಿಗೆ ಐದು ಗ್ಯಾರೆಂಟಿಗಳನ್ನು ಕೊಡುತ್ತಿದೆ. ಕಳೆದ ಮೂರು ವರ್ಷಗಳ ಆಡಳಿತದಲ್ಲಿ 56 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರೆಂಟಿಗಳಿಗಾಗಿಯೇ ಸರ್ಕಾರ ಒದಗಿಸಿದೆ. ಮುಂಬರುವ 2028ರ ಹೊತ್ತಿಗೆ ಇನ್ನೂ ಐದು ಗ್ಯಾರೆಂಟಿಗಳನ್ನು ಸರ್ಕಾರ ಕೊಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಿಂಚಣಿ ನಿಂತಿರಲು ಕಾರಣವೇನು?
ಪಿಂಚಣಿ ಹಣ ಬಾರದೆ ಪರದಾಡುತ್ತಿರುವ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, “ಯಾರ ಆಧಾರ್ ಕಾರ್ಡ್ನಲ್ಲಿ ವಯಸ್ಸಿನ ವ್ಯತ್ಯಾಸವಿದೆಯೋ ಮತ್ತು ಯಾರ ದಾಖಲೆಗಳು ಹೊಂದಾಣಿಕೆ ಆಗುತ್ತಿಲ್ಲವೋ ಅಂಥವರಿಗೆ ಮಾತ್ರ ಪಿಂಚಣಿ ಹಣ ನಿಲ್ಲಿಸಲಾಗಿದೆ. ಇದನ್ನು ಪರಿಶೀಲನೆ ಮಾಡುತ್ತಿರುವವರು ಕೇಂದ್ರ ಸರ್ಕಾರದವರು. ಹಾಗಾಗಿ ವಿಪಕ್ಷಗಳು ಯೋಜನೆಗಳ ಬಗ್ಗೆ ಸರಿಯಾಗಿ ತಿಳಿದು ಮಾತನಾಡಬೇಕು. ಅಗತ್ಯ ದಾಖಲೆಗಳನ್ನು ಸರಿಪಡಿಸಿ ಕೊಟ್ಟರೆ ಮತ್ತೆ ಪಿಂಚಣಿ ಹಣ ಸಂದಾಯವಾಗುತ್ತದೆ” ಎಂದು ವಿವರಿಸಿದರು.
ಇದೇ ವೇಳೆ ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ಆ ಬಗ್ಗೆ ನನಗೇನು ಗೊತ್ತಿಲ್ಲ’ ಎಂದು ಸಂಸದ ಶ್ರೇಯಸ್ ಪಟೇಲ್ ಪ್ರತಿಕ್ರಿಯಿಸಿದರು.










