ಚಿತ್ರದುರ್ಗದ ರೇಣುಕಾಸ್ವಾಮಿಯ ಶತಾಯುಷಿ ಅಜ್ಜಿ ಪ್ರಮೀಳಾದೇವಿ ನಿಧನ

ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಶತಾಯುಷಿ ಅಜ್ಜಿ ಪ್ರಮೀಳಾದೇವಿ (101) ಇಂದು ಮುಂಜಾನೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕುಟುಂಬಸ್ಥರಲ್ಲಿ ಶೋಕ ಮನೆಮಾಡಿದೆ.

ಚಿತ್ರದುರ್ಗ, ಜೂನ್ 17,(www.kannadapost.com):  ಡಿ ಗ್ಯಾಂಗ್ ಪ್ರಕರಣದಲ್ಲಿ ಮೃತಪಟ್ಟಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಶತಾಯುಷಿ ಅಜ್ಜಿ ಪ್ರಮೀಳಾದೇವಿ (101) ಅವರು ಇಂದು ಮುಂಜಾನೆ ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ.

ಕುಟುಂಬ ಮೂಲಗಳ ಪ್ರಕಾರ, ಪ್ರಮೀಳಾದೇವಿ ಅವರು ಇಂದು ಬೆಳಿಗ್ಗೆ ಸುಮಾರು 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಅವರು ಚಿತ್ರದುರ್ಗ ನಗರದ VRS ಬಡಾವಣೆಯಲ್ಲಿ ವಾಸವಾಗಿದ್ದರು.

ಮೃತರು ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದು, ಕುಟುಂಬಸ್ಥರು ಮತ್ತು ಬಂಧು ಬಳಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ಕುಟುಂಬವು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ, ಇದೀಗ ಕುಟುಂಬದ ಹಿರಿಯ ಸದಸ್ಯೆಯಾಗಿದ್ದ ಪ್ರಮೀಳಾದೇವಿ ಅವರ ನಿಧನ ಮತ್ತಷ್ಟು ದುಃಖಕ್ಕೆ ಕಾರಣವಾಗಿದೆ.

ಕುಟುಂಬಸ್ಥರು ಹಾಗೂ ಬಂಧುಗಳು ಮೃತರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸುತ್ತಿದ್ದಾರೆ.