
ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ದ್ವಿಭಾಷಾ ಕಲಿಕೆ ವ್ಯವಸ್ಥೆಯಡಿ ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತರಿಸಿದ ವಿದ್ಯಾರ್ಥಿಗಳಿಗೆ ಮಾತ್ರ ‘ಎ ಶ್ರೇಣಿ’ ಮತ್ತು ಕನ್ನಡದಲ್ಲಿ ಉತ್ತರಿಸಿದ ವಿದ್ಯಾರ್ಥಿಗಳಿಗೆ ‘ಬಿ ಶ್ರೇಣಿ’ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕ್ರಮವನ್ನು ಖಂಡಿಸಿರುವ ಎಐಡಿಎಸ್ಓ (AIDSO) ಹಾಸನ ಜಿಲ್ಲಾ ಘಟಕ, ಇದು ಕನ್ನಡ ಭಾಷೆ ಹಾಗೂ ಮಾತೃಭಾಷಾ ಶಿಕ್ಷಣದ ಮೇಲಿನ ಅನ್ಯಾಯ ಎಂದು ಆರೋಪಿಸಿದೆ.
ಹಾಸನ,ಜೂನ್ 16(www.kannadapost.com): ಹಿಂದಿನ ತರಗತಿಯಿಂದ ಮುಂದಿನ ತರಗತಿಗೆ ಸಾಗುವ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅಳೆಯಲು ಸರ್ಕಾರ ನಡೆಸುತ್ತಿರುವ ಸೇತುಬಂಧ ಪರೀಕ್ಷೆಗಳ ಮೌಲ್ಯಮಾಪನ ಕ್ರಮದ ವಿರುದ್ಧ ಎಐಡಿಎಸ್ಓ (ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್) ಹಾಸನ ಜಿಲ್ಲಾ ಘಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ದ್ವಿಭಾಷಾ ಮಾಧ್ಯಮ ಜಾರಿಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತರಿಸಿದ ವಿದ್ಯಾರ್ಥಿಗಳಿಗೆ ಮಾತ್ರ ‘ಎ ಶ್ರೇಣಿ’ ನೀಡಲಾಗುತ್ತಿದ್ದು, ಕನ್ನಡದಲ್ಲಿ ಉತ್ತರಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಉತ್ತರ ಬರೆದಿದ್ದರೂ ‘ಬಿ ಶ್ರೇಣಿ’ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕ್ರಮವು ಭಾಷಾ ಆಯ್ಕೆ ಸ್ವಾತಂತ್ರ್ಯದ ಉಲ್ಲಂಘನೆಯಾಗಿದ್ದು, ಕನ್ನಡ ಭಾಷೆಯನ್ನು ಎರಡನೇ ಸ್ಥಾನಕ್ಕೆ ತಳ್ಳುವ ಪ್ರಯತ್ನವಾಗಿದೆ ಎಂದು ಎಐಡಿಎಸ್ಓ ತಿಳಿಸಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯ ಕಲಿಕೆಗೆ ಉತ್ತೇಜನ ನೀಡಬೇಕು ಎಂಬ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಆತ್ಮಕ್ಕೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ಮಾತೃಭಾಷೆಯೇ ವಿದ್ಯಾರ್ಥಿಯ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಯ ತಳಹದಿ. ಅಂತಹ ಮಾತೃಭಾಷಾ ಶಿಕ್ಷಣವನ್ನು ಕಡೆಗಣಿಸಿ ದ್ವಿಭಾಷಾ ವ್ಯವಸ್ಥೆಯನ್ನು ಜಾರಿಗೊಳಿಸಿರುವುದು ಶಿಕ್ಷಣ ತಜ್ಞರು ಮತ್ತು ಭಾಷಾ ತಜ್ಞರ ಅಭಿಪ್ರಾಯಗಳಿಗೆ ವಿರುದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರೊಂದಿಗೆ ಸಮಾಲೋಚನೆ ನಡೆಸದೇ ದ್ವಿಭಾಷಾ ಮಾಧ್ಯಮ ಜಾರಿಗೊಳಿಸಿರುವುದೇ ಈ ಸಮಸ್ಯೆಗೆ ಮೂಲ ಕಾರಣ ಎಂದು ಎಐಡಿಎಸ್ಓ ಆರೋಪಿಸಿದೆ. ರಾಜ್ಯ ಸರ್ಕಾರ ಕೂಡಲೇ ಈ ಶಿಕ್ಷಣ ವಿರೋಧಿ, ಅವೈಜ್ಞಾನಿಕ ಹಾಗೂ ಅಪ್ರಜಾತಾಂತ್ರಿಕ ಕ್ರಮವನ್ನು ಹಿಂಪಡೆಯಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಕನ್ನಡ ಮಾಧ್ಯಮದ ಆಯ್ಕೆ ಸ್ವಾತಂತ್ರ್ಯವನ್ನು ರಕ್ಷಿಸಿ, ಮಾತೃಭಾಷಾ ಶಿಕ್ಷಣಕ್ಕೆ ಉತ್ತೇಜನ ನೀಡುವ ನೀತಿಗಳನ್ನು ಜಾರಿಗೆ ತರಬೇಕೆಂದು ಎಐಡಿಎಸ್ಓ ಹಾಸನ ಜಿಲ್ಲಾ ಘಟಕ ಒತ್ತಾಯಿಸಿದೆ.









