20 C
Munich
Home News ‘ಮತ್ತೆ ಚಿಗುರಿದ ಕನಸು’ ವೈವಿಧ್ಯಮಯ ಕಾವ್ಯ ಸಂಕಲನ: ಕವಯಿತ್ರಿ ಚಂದ್ರಕಲಾ ಎಂ. ಆಲೂರು

‘ಮತ್ತೆ ಚಿಗುರಿದ ಕನಸು’ ವೈವಿಧ್ಯಮಯ ಕಾವ್ಯ ಸಂಕಲನ: ಕವಯಿತ್ರಿ ಚಂದ್ರಕಲಾ ಎಂ. ಆಲೂರು

ಹಾಸನ ಸಾಹಿತ್ಯ ಕಾರ್ಯಕ್ರಮದಲ್ಲಿ ಮತ್ತೆ ಚಿಗುರಿದ ಕನಸು ಕೃತಿ ವಿಮರ್ಶೆ
ಹಾಸನದಲ್ಲಿ ನಡೆದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ 41ನೇ ಮಾಸಿಕ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ‘ಮತ್ತೆ ಚಿಗುರಿದ ಕನಸು’ ಕೃತಿ ಕುರಿತು ಚರ್ಚೆ.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ 41ನೇ ಮಾಸಿಕ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಕೃತಿ ವಿಮರ್ಶೆ

ಹಾಸನ, ಜೂನ್ 16(www.kannadapost.com):  ಪದ್ಮಾವತಿ ವೆಂಕಟೇಶ್ ಅವರ ‘ಮತ್ತೆ ಚಿಗುರಿದ ಕನಸು’ ಕವನ ಸಂಕಲನವು ವೈವಿಧ್ಯಮಯ ಕಾವ್ಯಲಹರಿಯನ್ನು ಒಳಗೊಂಡಿದ್ದು, ಮಾನವೀಯ ಮೌಲ್ಯಗಳನ್ನು ಗರ್ಭೀಕರಿಸಿಕೊಂಡಿರುವ ಮಹತ್ವದ ಕೃತಿ ಎಂದು ಕವಯಿತ್ರಿ ಚಂದ್ರಕಲಾ ಎಂ. ಆಲೂರು ಅಭಿಪ್ರಾಯಪಟ್ಟರು.

ಹಾಸನ ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಚಿಕ್ಕಕೊಂಡಗುಳ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಎಚ್.ಎಸ್. ಭಾನುಮತಿ ಅವರ ನಿವಾಸದಲ್ಲಿ ಜನನಿ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ 41ನೇ ಮಾಸಿಕ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪದ್ಮಾವತಿ ವೆಂಕಟೇಶ್ ಅವರ ‘ಮತ್ತೆ ಚಿಗುರಿದ ಕನಸು’ ಕೃತಿಯನ್ನು ವಿಮರ್ಶಿಸಿದ ಅವರು, ಈ ಸಂಕಲನದಲ್ಲಿ ಸುಮಾರು 38 ಕವಿತೆಗಳಿದ್ದು, ರಾಷ್ಟ್ರಪ್ರೇಮ, ಪ್ರಕೃತಿಪ್ರೇಮ, ಬದುಕಿನ ಒಲವು-ನಲಿವು, ವ್ಯಕ್ತಿಚಿತ್ರಣ ಹಾಗೂ ಹೆಣ್ಣಿನ ಅಂತರಂಗದ ತಳಮಳಗಳನ್ನು ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ ಎಂದರು.

ಕವಿತೆಗಳು ಕವಿಯ ಅಂತರಂಗದ ಮಿಡಿತ, ಭಾವನೆಗಳ ಅಭಿವ್ಯಕ್ತಿ ಹಾಗೂ ಓದುಗರ ಮನಸ್ಸಿಗೆ ರಸದೌತಣ ನೀಡುವ ಸಾಧನವಾಗಿವೆ. ಪದ್ಮಾವತಿ ವೆಂಕಟೇಶ್ ಅವರ ಚೊಚ್ಚಲ ಕವನ ಸಂಕಲನವಾಗಿದ್ದರೂ, ಇಳಿವಯಸ್ಸಿನಲ್ಲಿಯೇ ಕಾವ್ಯ ರಚನೆಯ ಬಗ್ಗೆ ಆಸಕ್ತಿ ಮತ್ತು ಅಭಿರುಚಿಯನ್ನು ಬೆಳೆಸಿಕೊಂಡಿರುವುದು ಅವರ ಸಾಹಿತ್ಯಾಸಕ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಾಹಿತ್ಯದ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ಕಳೆದ ಏಳು-ಎಂಟು ವರ್ಷಗಳಿಂದ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನೂರಾರು ಉದಯೋನ್ಮುಖ ಪ್ರತಿಭೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸುವ ಕೆಲಸವನ್ನು ವೇದಿಕೆ ಮಾಡುತ್ತಿದೆ ಎಂದರು.

ಹಾಸನ ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ವಿಭಿನ್ನ ಸಾಹಿತ್ಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಹೊಸ ಬರಹಗಾರರಿಗೆ ಕಾವ್ಯ, ಗದ್ಯ, ವಿಮರ್ಶೆ ಹಾಗೂ ಉಪನ್ಯಾಸ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸುವ ಮೂಲಕ ಸಾಹಿತ್ಯದತ್ತ ಆಕರ್ಷಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಹಿತ್ಯ ಸಮಾಜದ ಕನ್ನಡಿಯಾಗಬೇಕು

ಕಾವ್ಯ ಕೇವಲ ಭಾವನೆಗಳ ಅಭಿವ್ಯಕ್ತಿಯಾಗದೆ ಸಮಾಜದ ತಲ್ಲಣಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು. ಇತ್ತೀಚಿನ ದಿನಗಳಲ್ಲಿ ಅಧ್ಯಯನವಿಲ್ಲದೆ ಕವಿತೆ ಬರೆಯುವ ಪ್ರವೃತ್ತಿ ಹೆಚ್ಚಾಗಿದ್ದು, ಸಾಹಿತ್ಯದ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ವೇದಿಕೆಯ ಕಾರ್ಯಕ್ಕೆ ಮೆಚ್ಚುಗೆ

ಜನನಿ ಫೌಂಡೇಷನ್ ಪ್ರಾಯೋಜಕತ್ವ ವಹಿಸಿದ್ದ ಎಚ್.ಎಸ್. ಭಾನುಮತಿ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನದಲ್ಲಿ ಹುಟ್ಟಿ ಇಂದು ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲಿಯೂ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕವಿಗೋಷ್ಠಿಯಲ್ಲಿ ಕವಿಗಳ ಕಾವ್ಯ ವಾಚನ

ಕಾರ್ಯಕ್ರಮದಲ್ಲಿ ಅರಕಲಗೂಡು ತಾಲ್ಲೂಕು ಅಧ್ಯಕ್ಷ ಗಂಗೇಶ್ ಬಸವನಹಳ್ಳಿ, ಕೃತಿಕರ್ತೃ ಪದ್ಮಾವತಿ ವೆಂಕಟೇಶ್ ಮಾತನಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಭಾರತಿ ಹಾದಿಗೆ, ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜ್, ಶಿವಣ್ಣ ಕೆರೆಕೋಡಿ, ರಂಗನಾಥ್ ಅರಕಲಗೂಡು, ರವಿ, ಸಿ.ಎನ್. ನೀಲಾವತಿ, ಗಿರಿಜಾ ನಿರ್ವಾಣಿ, ಗಿರೀಶ್ ಕೊಣನೂರು, ಎಚ್.ಬಿ. ಚೂಡಾಮಣಿ, ಸಾವಿತ್ರಿ, ರಾಣಿ ಸಿ. ಚರಾಶ್ರೀ, ನೀಲಮ್ಮ ಸೇರಿದಂತೆ ಅನೇಕ ಕವಿಗಳು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಎಚ್.ಜಿ. ಕಾಂಚನಮಾಲ, ಸುಂದ್ರಮ್ಮ, ಚಂದ್ರಮ್ಮ, ಹರಿಣಿಕುಮಾರಿ, ಪುಷ್ಪ, ಸಾವಿತ್ರಿ, ಜ್ಯೋತಿ, ಅನಿತಾ, ಚೈತ್ರ, ಬಬೀತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!