ಬೀದರ್ ಜಿಲ್ಲೆಯ ಶೆಂಬಳ್ಳಿ ಗ್ರಾಮದಲ್ಲಿ ಊಟದ ಬಳಿಕ ಮಾವಿನ ಹಣ್ಣು ಸೇವಿಸಿದ ನಂತರ ಅಸ್ವಸ್ಥಗೊಂಡ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ. ತಾಯಿ ಮತ್ತು ಮತ್ತೊಬ್ಬ ಪುತ್ರಿಯ ಸ್ಥಿತಿ ಗಂಭೀರವಾಗಿದೆ.
ಬೀದರ್, ಜೂನ್ 12, 2026(www.kannadapost.com): ರಾತ್ರಿ ಊಟದ ಬಳಿಕ ಮಾವಿನ ಹಣ್ಣು ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದ ಇಬ್ಬರು ಬಾಲಕಿಯರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ಶೆಂಬಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಮೃತ ಬಾಲಕಿಯರನ್ನು ಭವಾನಿ ವೈಜಿನಾಥ್ ಮೇತ್ರೆ (17) ಹಾಗೂ ಸಂಧ್ಯಾರಾಣಿ ಮೇತ್ರೆ (14) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಶೆಂಬಳ್ಳಿ ಗ್ರಾಮದ ಇಂದುಮತಿ ಹಾಗೂ ಅವರ ಮೂವರು ಪುತ್ರಿಯರು ಮನೆಯಲ್ಲಿ ರಾತ್ರಿ ಊಟ ಮಾಡಿದ ಬಳಿಕ ಮಾವಿನ ಹಣ್ಣು ಸೇವಿಸಿದ್ದಾರೆ. ಕೆಲವೇ ಸಮಯದಲ್ಲಿ ನಾಲ್ವರೂ ತೀವ್ರ ವಾಂತಿ ಹಾಗೂ ಭೇದಿಯಿಂದ ಬಳಲತೊಡಗಿದ್ದಾರೆ.
ತಕ್ಷಣ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭವಾನಿ ಹಾಗೂ ಸಂಧ್ಯಾರಾಣಿ ಮೃತಪಟ್ಟಿದ್ದಾರೆ.
ಇನ್ನೊಬ್ಬ ಪುತ್ರಿ ವಿಜಯಶ್ರೀ ಹಾಗೂ ತಾಯಿ ಇಂದುಮತಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆಗೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಹಾರ ವಿಷಬಾಧೆ ಅಥವಾ ಇತರೆ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ವೈದ್ಯಕೀಯ ವರದಿಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.










