
ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಸೋಲಿಲ್ಲದ ಸರದಾರ ‘ಬೆಳ್ಳೂಡಿ ಕಾಳಿ’ ಟಗರಿನ ಜೀವನ ಮತ್ತು ಸಾಧನೆ ಇದೀಗ ಡಾಕ್ಯುಮೆಂಟರಿ ರೂಪ ಪಡೆಯುತ್ತಿದೆ. ಯುವ ನಿರ್ದೇಶಕ ಗಿರೀಶ್ ಜಿ ಗೌಡ ನಿರ್ದೇಶನದ ‘Kali – The GOAT’ ಚಿತ್ರ ಶೀಘ್ರದಲ್ಲೇ ಬಿಡುಗಡೆ.
ದಾವಣಗೆರೆ,ಜೂನ್ 10,(www.kannadapost.com): ಟಗರು ಕಾಳಗದ ಜಗತ್ತಿನಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ, ಸಾವಿರಾರು ಅಭಿಮಾನಿಗಳ ಮನ ಗೆದ್ದಿದ್ದ ‘ಬೆಳ್ಳೂಡಿ ಕಾಳಿ’ ಟಗರಿನ ಜೀವನಗಾಥೆ ಇದೀಗ ಡಾಕ್ಯುಮೆಂಟರಿ ಫಿಲ್ಮ್ ರೂಪ ಪಡೆಯುತ್ತಿದೆ. ಯುವ ನಿರ್ದೇಶಕ ಗಿರೀಶ್ ಜಿ ಗೌಡ ಈ ಮಹತ್ವಾಕಾಂಕ್ಷಿ ಯೋಜನೆಗೆ ಆಕ್ಷನ್ ಕಟ್ ಹೇಳಿದ್ದು, ಡಾಕ್ಯುಮೆಂಟರಿಗೆ ‘Kali – The GOAT’ ಎಂಬ ಶೀರ್ಷಿಕೆ ನೀಡಲಾಗಿದೆ.
‘ಫಸ್ಟ್ ಡೇ ಫಸ್ಟ್ ಶೋ’, ‘ಶಾಲಿವಾಹನ ಶಕೆ’, ‘ಒಂದ್ ಕಥೆ ಹೇಳ್ಲಾ’ ಹಾಗೂ ‘ವಾವ್’ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಗಿರೀಶ್ ಜಿ ಗೌಡ, ಈ ಬಾರಿ ಟಗರು ಕಾಳಗದ ಲೋಕದ ದಂತಕಥೆಯಾದ ಬೆಳ್ಳೂಡಿ ಕಾಳಿಯ ಯಶೋಗಾಥೆಯನ್ನು ವಿಶ್ವದ ಮುಂದೆ ತರಲು ಮುಂದಾಗಿದ್ದಾರೆ.
ಟಗರು ಕಾಳಗದ ದಂತಕಥೆ
‘ಬೆಳ್ಳೂಡಿ ಕಾಳಿ’ ಟಗರು ತನ್ನ ಗತ್ತು, ಗಾಂಭೀರ್ಯ ಮತ್ತು ಸೋಲಿಲ್ಲದ ಸಾಧನೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಗಳಿಸಿತ್ತು. ವಿವಿಧ ಟಗರು ಕಾಳಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದ ಕಾಳಿಯನ್ನು ನೋಡಲು ಅಭಿಮಾನಿಗಳು ದೂರದೂರಿನಿಂದ ಆಗಮಿಸುತ್ತಿದ್ದರು.
ಕಾಳಿ ಕಣಕ್ಕಿಳಿಯುತ್ತಿದೆ ಎಂಬ ಸುದ್ದಿ ತಿಳಿದರೆ, ಇತರ ಟಗರಿನ ಮಾಲೀಕರು ತಮ್ಮ ಟಗರುಗಳನ್ನು ಸ್ಪರ್ಧೆಗೆ ಇಳಿಸಲು ಹಿಂದೇಟು ಹಾಕುತ್ತಿದ್ದರು ಎಂಬುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಕಾಳಿಯ ನಿಧನಕ್ಕೆ ಕಣ್ಣೀರಿಟ್ಟ ಅಭಿಮಾನಿಗಳು
2024ರಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ ಬೆಳ್ಳೂಡಿ ಕಾಳಿಗೆ ಅಂತಿಮ ವಿದಾಯ ಹೇಳಲು ಸಾವಿರಾರು ಜನರು ಹರಿದು ಬಂದಿದ್ದರು. ಮಾನವರಂತೆ ಹಿಂದೂ ಧರ್ಮದ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಶಿವಮೊಗ್ಗ ರಸ್ತೆಯ ಬಳಿ ಕಾಳಿಗೆ ವಿಶೇಷ ಸಮಾಧಿ ನಿರ್ಮಿಸಲಾಗಿದ್ದು, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಈ ಸಮಾಧಿಯಲ್ಲಿ ಇಂದಿಗೂ ನಿತ್ಯ ಪೂಜೆ ನಡೆಯುತ್ತಿದೆ.
‘Kali – The GOAT’ ವಿಶೇಷತೆ
ಈ ಡಾಕ್ಯುಮೆಂಟರಿಗಾಗಿ ಜೈನ್ ಯೂನಿವರ್ಸಿಟಿ ಸೇರಿದಂತೆ ವಿವಿಧ ಸಿನಿಮಾ ವಿದ್ಯಾರ್ಥಿಗಳನ್ನು ತಂತ್ರಜ್ಞರಾಗಿ ಆಯ್ಕೆ ಮಾಡಲಾಗಿದೆ. ದಾವಣಗೆರೆ ಮತ್ತು ಬಾಗಲಕೋಟೆ ಭಾಗಗಳ ವಿವಿಧ ಟಗರು ಕಾಳಗ ಮೈದಾನಗಳಲ್ಲಿ ಸ್ಥಳೀಯರ ಸಹಕಾರದೊಂದಿಗೆ ಚಿತ್ರೀಕರಣ ಪೂರ್ಣಗೊಂಡಿದೆ.
ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಡಾಕ್ಯುಮೆಂಟರಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಿಸಲಾಗಿದೆ. ಮುಂದಿನ ಎರಡು-ಮೂರು ತಿಂಗಳಲ್ಲಿ ದೊಡ್ಡ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ.
ಮನುಷ್ಯ ಮತ್ತು ಪ್ರಾಣಿಯ ಭಾವನಾತ್ಮಕ ಪಯಣ
‘Kali – The GOAT’ ಕೇವಲ ಟಗರು ಕಾಳಗದ ಕಥೆಯಲ್ಲ. ಮನುಷ್ಯ ಮತ್ತು ಪ್ರಾಣಿಯ ನಡುವಿನ ಅಪರೂಪದ ಭಾವನಾತ್ಮಕ ಬಂಧ, ಪ್ರೀತಿ ಮತ್ತು ನಂಬಿಕೆಯ ಪಯಣವನ್ನು ಜಗತ್ತಿನ ಮುಂದೆ ತರುವ ಪ್ರಯತ್ನವಾಗಿದೆ ಎಂದು ನಿರ್ದೇಶಕ ಗಿರೀಶ್ ಜಿ ಗೌಡ ತಿಳಿಸಿದ್ದಾರೆ.









