Bengaluru|ಬೆಂಗಳೂರು: ಒಪ್ಪಂದ ಪದ್ಧತಿಯಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿರುವ ರಾಜ್ಯದ ರೈತರಿಗೆ ಇನ್ನು ಮುಂದೆ ತಾತ್ಕಾಲಿಕವಾಗಿ ಕನಿಷ್ಠ ₹10 ಸಾಕಾಣೆ ದರ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋಳಿ ಸಾಕಾಣಿಕೆಗೆ ತಗಲುವ ಒಟ್ಟಾರೆ ವೆಚ್ಚದ ಆಧಾರದ ಮೇಲೆ ದರ ನಿಗದಿಪಡಿಸಲು ತಾಂತ್ರಿಕ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಕೋಳಿ ಸಾಕಾಣಿಕೆ ರೈತರಿಗೆ ಮಾರಾಟ ಕಂಪನಿಗಳು ಕೆಜಿಗೆ ₹6.25 ಪೈಸೆ ನೀಡುತ್ತಿದ್ದವು. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದ್ದು, ಕೆಜಿಗೆ ₹20 ದರ ನಿಗದಿ ಮಾಡಬೇಕೆಂದು ರಾಜ್ಯ ಪಶುಪಾಲನಾ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ರೈತರ ಮನವಿಗೆ ಸ್ಪಂದಿಸಿದ ಪಶು ಸಂಗೋಪನೆ ಇಲಾಖೆ ಆಯುಕ್ತೆ ಶಿಲ್ಪಾ ನಾಗ್ ಹಾಗೂ ಅಧಿಕಾರಿಗಳ ತಂಡ, ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಸಂಘ ಮತ್ತು ಕೋಳಿ ಮಾರಾಟ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಹವಾಲು ಸ್ವೀಕರಿಸಿದೆ.
ರೈತರು, ಕಂಪನಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ನಿರ್ವಹಣಾ ಸಮಿತಿ ವರದಿ ಸಲ್ಲಿಸುವವರೆಗೂ ಕೋಳಿ ಮಾರಾಟ ಕಂಪನಿಗಳು ರೈತರಿಗೆ ತಾತ್ಕಾಲಿಕವಾಗಿ ಕನಿಷ್ಠ ₹10 ನೀಡಬೇಕು ಎಂದು ಸರ್ಕಾರ ಆದೇಶಿಸಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ರಾಜ್ಯ ಕೋಳಿ ಸಾಕಾಣಿಕೆ ಸಂಘ ಕಳೆದ ಐದು ತಿಂಗಳಿಂದ ನಡೆಸಿದ ನಿರಂತರ ಹೋರಾಟಕ್ಕೆ ಇದು ಜಯವಾಗಿದೆ. ಕೋಳಿ ಬೆಳಗಾರರಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಪ್ರಕಾರ ಲಾಭಾಂಶ ಸೇರಿಸಿ ವೈಜ್ಞಾನಿಕ ದರ ನಿಗದಿಯಾಗಬೇಕು. ಜೊತೆಗೆ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ₹25 ಲಕ್ಷ ಸಾಲ ಹಾಗೂ ಸಹಾಯಧನ ಸೌಲಭ್ಯ ಜಾರಿಯಾಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.










