Belagavi: ನಿಮ್ಮನ್ನು ಗಂಡಸು ಮಾಡಲು ಬಂದಿದ್ದೇನೆ, 15 ಸಾವಿರ ಬಂದೂಕಿವೆ, 2028ಕ್ಕೆ ನಾನೇ ಸಿಎಂ ಎಂದು ಭಾಷಣ ಮಾಡ್ತಿದ್ದವನ ಕಚೇರಿ ಮೇಲೆ ಜಿಲ್ಲಾಡಳಿತ ದಾಳಿ!

ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ, ಉದ್ಯಮಿ ಶಿವಾನಂದ ನೀಲಣ್ಣನವರ್ ಕಚೇರಿ ಹಾಗೂ ಮನೆ ಮೇಲೆ ಅಧಿಕಾರಿಗಳ ದಿಢೀರ್ ದಾಳಿ. ₹4500 ಕೋಟಿಗೂ ಅಧಿಕ ಪೊಂಜಿ ಸ್ಕೀಮ್ ವಂಚನೆ ಶಂಕೆ, ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

Belagavi|ಬೆಳಗಾವಿ: ನಗರದಲ್ಲಿ ಭಾರಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆವೇಶಭರಿತ ಭಾಷಣಗಳಿಂದಲೇ ಇತ್ತೀಚೆಗೆ ವೈರಲ್ ಆಗಿದ್ದ ಉದ್ಯಮಿ ಶಿವಾನಂದ ನೀಲಣ್ಣನವರ್ ಅವರಿಗೆ ಸೇರಿದ ‘ಶಿವಂ ಅಸೋಸಿಯೇಟ್ಸ್’ ಕಚೇರಿ ಹಾಗೂ ನಿವಾಸಗಳ ಮೇಲೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ದಾಳಿ ನಡೆಸಿದ್ದಾರೆ. ಸಾರ್ವಜನಿಕರು ಹಾಗೂ ಮಾಜಿ ಸೈನಿಕರಿಂದ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚನೆ ಎಸಗಿರುವ ಗಂಭೀರ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿದೆ.

​ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನಿರ್ದೇಶನದ ಮೇರೆಗೆ ಸಹಕಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು, ಉಪ ವಿಭಾಗಾಧಿಕಾರಿ (AC) ಶ್ರವಣ್ ಕುಮಾರ್ ನಾಯಕ್ ನೇತೃತ್ವದಲ್ಲಿ ಬೆಳಗಾವಿಯ ಶಿವಬಸವನ ನಗರದಲ್ಲಿರುವ ಕಚೇರಿ ಮತ್ತು ನಿವಾಸದಲ್ಲಿ ಸತತ 24 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ್ದಾರೆ.

ದಾಳಿಗೆ ಪ್ರಮುಖ ಕಾರಣಗಳು:

  • ಪೊಂಜಿ ಸ್ಕೀಮ್ (Ponzi Scheme) ಶಂಕೆ: ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಮೂಲಕ ಗ್ರಾಹಕರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಹಣ ಸಂಗ್ರಹ ಮಾಡಲಾಗುತ್ತಿತ್ತು. ಆದರೆ, ಈ ವ್ಯವಹಾರದಲ್ಲಿ ಯಾವುದೇ ಆರ್‌ಬಿಐ (RBI) ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
  • ₹4,500 – ₹4,600 ಕೋಟಿ ಹಣ ದುರುಪಯೋಗದ ಆರೋಪ: ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 45,000 ಕ್ಕೂ ಹೆಚ್ಚು ಜನರು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದು, ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಮೊತ್ತದ ಹಣದ ವಹಿವಾಟು ನಡೆದಿದೆ. ಹೂಡಿಕೆದಾರರಲ್ಲಿ ನಿವೃತ್ತ ಯೋಧರು ಮತ್ತು ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
  • ​ಭಾರಿ ಪ್ರಮಾಣದ ಆನ್‌ಲೈನ್ ವಹಿವಾಟುಗಳು ನಡೆದಿದ್ದರೂ, ಆದಾಯ ತೆರಿಗೆ (IT) ಅಥವಾ ಜಾರಿ ನಿರ್ದೇಶನಾಲಯದ (ED) ಕಣ್ತಪ್ಪಿಸಿ ವ್ಯವಹಾರ ನಡೆಸುತ್ತಿದ್ದುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಸದ್ಯ ಹೂಡಿಕೆಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಹಿನ್ನೆಲೆ ಹಾಗೂ ವಿವಾದಗಳು:

​ಮೂಲತಃ ಹುಬ್ಬಳ್ಳಿಯವರಾದ ಶಿವಾನಂದ ನೀಲಣ್ಣನವರ್, ಇತ್ತೀಚೆಗೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದರು.

  • “ನನ್ನ ಬಳಿ 15,000 ಬಂದೂಕುಗಳಿವೆ”: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ನಾನು ಯಾರಿಗೂ ಹೆದರುವುದಿಲ್ಲ, ನನ್ನ ಬಳಿ 15,000 ಬಂದೂಕುಗಳಿವೆ, ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ” ಎಂದು ಹೇಳಿಕೆ ನೀಡಿದ್ದರು.
  • ಮುಂದಿನ ಸಿಎಂ ನಾನೇ: “2028ರ ಚುನಾವಣೆಯಲ್ಲಿ ಎಲ್ಲಾ 224 ಕ್ಷೇತ್ರಗಳಲ್ಲೂ ಗೆದ್ದು ನಾನೇ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ” ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದರು.
  • ಶಿವನ ಅವತಾರ: ವೇದಿಕೆಗಳ ಮೇಲೆ ‘ಓಂ ನಮಃ ಶಿವಾಯ’ ಎಂದು ಭಾಷಣ ಶುರು ಮಾಡುತ್ತಿದ್ದ ಇವರು, “ನಾನು ಶಿವನ ಅವತಾರ, ನಿಮ್ಮೆಲ್ಲರನ್ನು ಉದ್ದಾರ ಮಾಡಲು ಬಂದಿದ್ದೇನೆ, ನಾನು ಪಕ್ಕಾ ಗಂಡ್ಸು” ಎಂಬಂತಹ ಹೇಳಿಕೆಗಳನ್ನು ನೀಡಿ ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾಗಿದ್ದರು.
  • ​ಮೇ 17 ರಂದು ಬೆಳಗಾವಿಯಲ್ಲಿ ಸುಮಾರು 25,000 ಜನರನ್ನು ಸೇರಿಸಿ ‘ಸ್ವಚ್ಛ ಬೆಳಗಾವಿ’ ಎಂಬ ಬೃಹತ್ ಕಾರ್ಯಕ್ರಮ ನಡೆಸಲು ಮುಂದಾಗಿದ್ದರು. ಆದರೆ ಜಿಲ್ಲಾಡಳಿತ ಇದಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಿ, ಅವರ ಬ್ಯಾನರ್, ಕಟೌಟ್‌ಗಳನ್ನು ತೆರವುಗೊಳಿಸಿತ್ತು.

ಪ್ರಸ್ತುತ ಪರಿಸ್ಥಿತಿ:

​ದಾಳಿ ಮತ್ತು ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಜಪ್ತಿಯಾಗಿರುವ ದಾಖಲೆಗಳ ಬಗ್ಗೆ ಎಸಿ ಶ್ರವಣ್ ಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಿವಾನಂದ ಅವರ ಮನೆ ಹಾಗೂ ಕಚೇರಿ ಬಳಿ ಸಿಆರ್‌ಪಿಎಫ್ (CRPF) ತುಕಡಿ ಹಾಗೂ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ದಟ್ಟವಾಗಿದೆ.

​ಈ ಬೆಳವಣಿಗೆಗಳ ಬೆನ್ನಲ್ಲೇ ತಲೆಮರೆಸಿಕೊಂಡಿರುವ ಶಿವಾನಂದ ನೀಲಣ್ಣನವರ್ ಆಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ. “ನಾನು ಸುರಕ್ಷಿತವಾಗಿದ್ದೇನೆ. ಮುಂದಿನ 2-3 ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಹೂಡಿಕೆದಾರರು, ವಿಶೇಷವಾಗಿ ಮಹಿಳೆಯರು ಧೈರ್ಯವಾಗಿರಿ, ಯಾರೂ ಆತಂಕ ಪಡುವ ಅಗತ್ಯವಿಲ್ಲ” ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ತಮ್ಮ ಕಷ್ಟದ ಹಣವನ್ನು ಹೂಡಿಕೆ ಮಾಡಿರುವ ಸಾವಿರಾರು ಜನರ ಭವಿಷ್ಯ ಇದೀಗ ಜಿಲ್ಲಾಡಳಿತ ಕೈಗೊಳ್ಳುವ ಮುಂದಿನ ಕ್ರಮದ ಮೇಲೆ ನಿಂತಿದೆ.