ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ
ಹಾಸನ,ಮೇ,15,2026(www.kannadapost.com): ಹಾಸನದ ಪ್ರತಿಷ್ಠಿತ ಮಲೆನಾಡು ಇಂಜಿನಿಯರಿಂಗ್ ಕಾಲೇಜುಗೆ ನೂತನ ಪ್ರಾಂಶುಪಾಲರಾಗಿ ಡಾ. ಎಸ್. ಪ್ರದೀಪ್ ಅವರನ್ನು ನೇಮಕ ಮಾಡಲಾಗಿದೆ. ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಬಿ.ಆರ್. ಗುರುದೇವ್ ಮತ್ತು ಆಡಳಿತ ಮಂಡಳಿಯವರು ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ.
2026ರ ಮೇ 15ರಂದು ಕಾಲೇಜಿನ ಹಾಲಿ ಪ್ರಾಂಶುಪಾಲರಾಗಿದ್ದ ಡಾ. ಹೆಚ್.ಜೆ. ಅಮರೇಂದ್ರ್ ಅವರು ನೂತನ ಪ್ರಾಂಶುಪಾಲರಾದ ಡಾ. ಎಸ್. ಪ್ರದೀಪ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಯಿಂದಲೇ ಪ್ರಾಂಶುಪಾಲರ ಹುದ್ದೆ
ಡಾ. ಎಸ್. ಪ್ರದೀಪ್ ಅವರು ಇದೇ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಪೂರ್ಣಗೊಳಿಸಿ ನಂತರ ಉಪನ್ಯಾಸಕರಾಗಿ ಸೇವೆ ಆರಂಭಿಸಿದ್ದರು. ಬಳಿಕ ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾಗಿ ಹಾಗೂ ಈ ಹಿಂದೆ ಕೂಡ ಕಾಲೇಜಿನ ಪ್ರಾಂಶುಪಾಲರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದರು.
ಅವರ ಉತ್ತಮ ಆಡಳಿತ ಹಾಗೂ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಮತ್ತೆ ಪ್ರಾಂಶುಪಾಲರಾಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಿ.ಆರ್. ಗುರುದೇವ್ ಸಂತಸ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಹೊಸ ಆಡಳಿತ ಮಂಡಳಿಯ ಸಂಕಲ್ಪ
ಮಲೆನಾಡು ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಸಂಸ್ಥೆಯ ಅಧೀನದಲ್ಲಿರುವ ಎಲ್ಲಾ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ನೂತನ ಆಡಳಿತ ಮಂಡಳಿ ಶ್ರಮಿಸುವುದಾಗಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಹಾಸನ ನಗರಸಭಾ ಅಧ್ಯಕ್ಷ ಜಿ.ಟಿ. ಕುಮಾರ್ ಅವರು ನೂತನ ಪ್ರಾಂಶುಪಾಲರಿಗೆ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು
ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಎಸ್. ಶ್ರೀಧರ್, ನಿರ್ದೇಶಕರಾದ ಕೆ.ಎಂ. ಶಿವಣ್ಣ, ಕೆ. ಪ್ರಭಾಕರ್, ಕೆ.ಎನ್. ಗುರಪ್ಪ, ಭುವನಹಳ್ಳಿ ಶ್ರೀನಿವಾಸ್ ಹಾಗೂ ಎಸ್. ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದು ನೂತನ ಪ್ರಾಂಶುಪಾಲರಿಗೆ ಅಭಿನಂದನೆ ಸಲ್ಲಿಸಿದರು.










