- ಹಾಸನದಲ್ಲಿ ಮಾನವ-ಆನೆ ಸಂಘರ್ಷ ನಿರ್ವಹಣೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಆನೆ ಕಾರ್ಯಪಡೆಯ ಸುಭಾಶ್‌ಕುಮಾರ್ ಬಿ.ಕೆ. ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ನೀಡಿ ಗೌರವಿಸಿದ್ದಾರೆ.
Hassan|ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಇಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕಾರು ಡಿಕ್ಕಿಯಾದ ಪರಿಣಾಮ ಮೂರೂವರೆ ವರ್ಷದ ಮಗು ಮೃತಪಟ್ಟಿರುವ ಮನಕಲಕುವ ಘಟನೆ ನಡೆದಿದೆ.
ಘಟನೆಯ ವಿವರ:
ಚನ್ನರಾಯಪಟ್ಟಣ ತಾಲೂಕಿನ ಕುರುವಂಕ ಗ್ರಾಮದ ನಿವಾಸಿಗಳಾದ ಚಂದ್ರಶೇಖರ್ ಮತ್ತು ವಂದನಾ ದಂಪತಿಯ ಪುತ್ರ ದನ್ವಂತ್ (3.5 ವರ್ಷ) ಮೃತಪಟ್ಟ ದುರ್ದೈವಿ.
ಇಂದು ಬೆಳಿಗ್ಗೆ ಮಗುವಿನ ಅಜ್ಜಿ ಇಂದ್ರಮ್ಮ ಅವರು ಡೇರಿಗೆ ಹಾಲು ಹಾಕಲು ಮನೆಯಿಂದ ಹೊರಟಿದ್ದರು. ಈ ವೇಳೆ ಅಜ್ಜಿಗೆ ತಿಳಿಯದಂತೆ ಮಗು ದನ್ವಂತ್ ಅವರನ್ನು ಹಿಂಬಾಲಿಸಿಕೊಂಡು ರಸ್ತೆಗೆ ಬಂದಿದ್ದಾನೆ. ಮಗು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅತೀ ವೇಗವಾಗಿ ಬಂದ ಸ್ವಿಫ್ಟ್ ಕಾರು ಮಗುವಿಗೆ ಜೋರಾಗಿ ಡಿಕ್ಕಿ ಹೊಡೆದಿದೆ.
ಚಿಕಿತ್ಸೆ ಫಲಕಾರಿಯಾಗದೆ ಸಾವು:
ಅಪಘಾತದ ತೀವ್ರತೆಗೆ ಮಗು ದನ್ವಂತ್ ರಕ್ತದ ಮಡುವಿನಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣವೇ ಪೋಷಕರು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾದರಾದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದ್ದಾನೆ.
ಪೋಷಕರ ಆಕ್ರಂದನ:
ಕಣ್ಣೆದುರೇ ಆಟವಾಡಿಕೊಂಡಿದ್ದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಕುರುವಂಕ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಅಜ್ಜಿಯನ್ನು ಹಿಂಬಾಲಿಸಿ ಬಂದದ್ದೇ ಮಗುವಿನ ಸಾವಿಗೆ ಕಾರಣವಾಯಿತೇ ಎಂದು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.
ಪೊಲೀಸ್ ಭೇಟಿ:
ವಿಷಯ ತಿಳಿಯುತ್ತಿದ್ದಂತೆಯೇ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.










