- Hassan:ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಮೃತಪಟ್ಟವರ ಕುಟುಂಬಗಳಿಗೆ ಒಟ್ಟು ₹15 ಲಕ್ಷ ಪರಿಹಾರ ನೀಡುವಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೂ ಅವರು ಹಾಸನದಲ್ಲಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
Hassan|ಹಾಸನ: ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿರುವ ಘಟನೆ ಅತ್ಯಂತ ಹೃದಯವಿದ್ರಾವಕವಾಗಿದ್ದು, ಮೃತರ ಕುಟುಂಬಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕೀಯ ಹಾಗೂ ಶಿಕ್ಷಣ ವ್ಯವಸ್ಥೆಯ ಕುರಿತಾಗಿಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಆ ದೃಶ್ಯ ನೋಡಿದರೆ ಹೊಟ್ಟೆ ಉರಿಯುತ್ತದೆ
ಆಸ್ಪತ್ರೆ ಗೋಡೆ ಕುಸಿತದ ದುರಂತದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಎಚ್.ಡಿ.ರೇವಣ್ಣ, “ಆ ದುರಂತದ ದೃಶ್ಯ ನೋಡಿದರೆ ಹೊಟ್ಟೆ ಉರಿದು ಹೋಗುತ್ತದೆ. ಮೃತಪಟ್ಟವರೆಲ್ಲರೂ ಬೆಳಿಗ್ಗೆ ಎದ್ದರೆ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದವರು. ಆಸ್ಪತ್ರೆಯ ಗೋಡೆ ಪಕ್ಕದ ಬೀದಿಯಲ್ಲಿ ಕುಳಿತು ಸಣ್ಣಪುಟ್ಟ ವ್ಯಾಪಾರ ಮಾಡುತ್ತಾ ರಾತ್ರಿ ಊಟದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಈಗ ಅವರನ್ನೇ ನಂಬಿದ್ದ ಇಡೀ ಕುಟುಂಬವೇ ಅನಾಥವಾಗಿದೆ,” ಎಂದು ಕಂಬನಿ ಮಿಡಿದರು.
”ಸರ್ಕಾರ ಪ್ರಸ್ತುತ ಘೋಷಿಸಿರುವ ಪರಿಹಾರ ಯಾವುದಕ್ಕೂ ಸಾಲದು. ರಾಜ್ಯ ಸರ್ಕಾರ ಕನಿಷ್ಠ 10 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರ ಅಥವಾ ಪ್ರಧಾನಮಂತ್ರಿಗಳು 5 ಲಕ್ಷ ರೂ. ಸೇರಿದಂತೆ ಒಟ್ಟು 15 ಲಕ್ಷ ರೂ. ಪರಿಹಾರವನ್ನು ಆ ಬಡ ಕುಟುಂಬಗಳಿಗೆ ನೀಡಬೇಕು” ಎಂದು ರೇವಣ್ಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗ್ರಹಿಸಿದರು.
ಶಾಲೆಗಳನ್ನು ಮುಚ್ಚುವುದನ್ನು ನಿಲ್ಲಿಸಿ
ರಾಜ್ಯದ ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆಯೂ ಧ್ವನಿಯೆತ್ತಿದ ಮಾಜಿ ಸಚಿವರು, ಶಿಕ್ಷಣ ಸಚಿವರಿಗೆ ನೇರ ಎಚ್ಚರಿಕೆ ನೀಡಿದರು. “ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಿಗೆ ತಕ್ಷಣವೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಿ, ಹಳ್ಳಿ ಮಕ್ಕಳಿಗೆ ಗುಣಮಟ್ಟದ ಒಳ್ಳೆಯ ವಿದ್ಯಾಭ್ಯಾಸ ಒದಗಿಸಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.
ಸಿಎಂ ಬದಲಾವಣೆ ಅವರಿಗೆ ಬಿಟ್ಟದ್ದು, ಮೊದಲು ಜನರನ್ನು ಉಳಿಸಿ
ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ವದಂತಿಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, “ಅದು ಅವರ ಪಕ್ಷದ ವಿಚಾರ, ಅವರು ಏನಾದರೂ ಮಾಡಿಕೊಳ್ಳಲಿ, ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಮಗೆ ಬೇಕಿರುವುದು ಜನರ ಪ್ರಾಣ ಉಳಿಯಬೇಕು ಅಷ್ಟೇ. ಜನರಿಗೆ ಕುಡಿಯುವ ನೀರು ಕೊಡಿ ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ,” ಎಂದರು.
”ಉಳಿದ ರಾಜಕೀಯ ಹಾಗೂ ಬೇರೆ ವಿಷಯಗಳ ಬಗ್ಗೆ ನಾನೀಗ ಮಾತನಾಡುವುದಿಲ್ಲ. 2028ರ ಚುನಾವಣೆ ಬಂದಾಗ ರಾಜಕೀಯ ಮಾಡೋಣ, ಮೊದಲು ಜನರನ್ನು ಉಳಿಸಿಕೊಳ್ಳುವ ಕೆಲಸ ಆಗಲಿ,” ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.










