Hassan: ಬೈಕ್‌ಗೆ ಟಾಟಾ ಏಸ್ ಡಿಕ್ಕಿ; ಸ್ಥಳದಲ್ಲೇ ಸಾವನ್ನಪ್ಪಿದ ಅರ್ಚಕ, ಮತ್ತೋಬ್ಬರ ಸ್ಥಿತಿ ಗಂಭೀರ

  • ಬೇಲೂರು ತಾಲೂಕಿನ ಬಿಕ್ಕೋಡು ಬಳಿ ಬೈಕ್‌ಗೆ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಕಡೆಗರ್ಜೆ ಗ್ರಾಮದ ಕೆರಕೋಡಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೇಖರ್ (44) ಮೃತಪಟ್ಟಿದ್ದಾರೆ.

Hassan|ಹಾಸನ: ಬೈಕ್‌ಗೆ ಟಾಟಾ ಏಸ್ ವಾಹನವೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ದೇವಸ್ಥಾನದ ಅರ್ಚಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ಬಳಿ ನಡೆದಿದೆ.

​ಕಡೆಗರ್ಜೆ ಗ್ರಾಮದ ಆದಿಶಕ್ತಿ ಕೆರಕೋಡಮ್ಮ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಎಚ್.ಆರ್. ಚಂದ್ರಶೇಖರ್ (44) ಮೃತಪಟ್ಟ ದುರ್ದೈವಿ. ಬೈಕ್‌ನಲ್ಲಿದ್ದ ಅವರ ಸ್ನೇಹಿತ ವೆಂಕಟೇಶ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ವಿವರ:

ಅರ್ಚಕ ಚಂದ್ರಶೇಖರ್ ಅವರು ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಬೆಳೆಗೆ ನೀರು ಹಾಯಿಸಿ, ಕೆಲಸ ಮುಗಿಸಿಕೊಂಡು ತಮ್ಮ ಸ್ನೇಹಿತ ವೆಂಕಟೇಶ್ ಅವರೊಂದಿಗೆ ಬೈಕ್‌ನಲ್ಲಿ ಬಿಕ್ಕೋಡು ಕಡೆಗೆ ವಾಪಸ್ ಬರುತ್ತಿದ್ದರು. ಈ ವೇಳೆ ಬಿಕ್ಕೋಡು ಕಡೆಯಿಂದ ವೇಗವಾಗಿ ಬರುತ್ತಿದ್ದ ಟಾಟಾ ಏಸ್ ವಾಹನ ಬೈಕ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ.

​ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅರ್ಚಕ ಚಂದ್ರಶೇಖರ್ ಅವರು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರ ಜೊತೆಯಲ್ಲಿದ್ದ ವೆಂಕಟೇಶ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

​ಅರ್ಚಕರ ಅಕಾಲಿಕ ನಿಧನದಿಂದ ಕಡೆಗರ್ಜೆ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

​ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅರೇಹಳ್ಳಿ ಠಾಣೆ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟಾಟಾ ಏಸ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.