Sakaleshapura: ಜೂಜಾಟ ತಂದ ದುರಂತ: ಹಣ ಕಳೆದುಕೊಂಡ ಭತ್ತದ ವ್ಯಾಪಾರಿ ವಿಷ ಸೇವಿಸಿ ಸಾವು

ಸಕಲೇಶಪುರದ ದಬ್ಬೆಗದ್ದೆ ಗ್ರಾಮದಲ್ಲಿ ಘಟನೆ – ಸಾಲ ಮಾಡಿ ಜೂಜಾಡಿ ಸಂಕಷ್ಟಕ್ಕೆ ಸಿಲುಕಿದ ರೇಣುಕಾಪ್ರಸಾದ್ ಆತ್ಮಹತ್ಯೆ

  • ಹಾಸನ ಜಿಲ್ಲೆಯ (sakaleshapura)ಸಕಲೇಶಪುರ ತಾಲೂಕಿನ ದಬ್ಬೆಗದ್ದೆ ಗ್ರಾಮದಲ್ಲಿ ಜೂಜಾಟದಲ್ಲಿ ಹಣ ಕಳೆದುಕೊಂಡ ಭತ್ತದ ವ್ಯಾಪಾರಿ ರೇಣುಕಾಪ್ರಸಾದ್ ವಿಷ ಸೇವಿಸಿ ಮೃತಪಟ್ಟಿದ್ದಾರೆ.

Sakaleshapura|ಸಕಲೇಶಪುರ: ತಾಲೂಕಿನಲ್ಲಿ ಜೂಜಾಟದ ಹಾವಳಿ ಮತ್ತೊಮ್ಮೆ ಜೀವ ಬಲಿಯಾಗಿದೆ.  ದಬ್ಬೆಗದ್ದೆ ಗ್ರಾಮದಲ್ಲಿ ಭತ್ತ ಹಾಗೂ ಕಾಫಿ ವ್ಯಾಪಾರಿ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ರೇಣುಕಾಪ್ರಸಾದ್ (44) ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಮೂಲಗಳ ಪ್ರಕಾರ, ರೇಣುಕಾಪ್ರಸಾದ್ ಅಂದರ್-ಬಾಹರ್ ಹಾಗೂ ಇಸ್ಪೀಟ್ ಜೂಜಾಟದಲ್ಲಿ ತೊಡಗಿಕೊಂಡಿದ್ದರು. ಜೂಜಾಟದಲ್ಲಿ ಹಣ ಕಳೆದುಕೊಂಡ ಬಳಿಕ, ಪ್ರಸನ್ನ ಎಂಬುವವರಿಂದ ಬಡ್ಡಿಗೆ ಹಣ ಪಡೆದು ಮತ್ತೊಮ್ಮೆ ಜೂಜಾಡಿದರೆಂದು ತಿಳಿದುಬಂದಿದೆ. ಆದರೆ ಆ ಹಣವನ್ನೂ ಕಳೆದುಕೊಂಡಿದ್ದು, ಬಳಿಕ ಹಣದ ಬದಲು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಅನ್ನು ಕಿತ್ತುಕೊಂಡಿರುವ ಆರೋಪ ಕೇಳಿಬಂದಿದೆ.

ಈ ಘಟನೆದಿಂದ ಮನನೊಂದು ರೇಣುಕಾಪ್ರಸಾದ್ ವಿಷ ಸೇವಿಸಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೊಂದೆಡೆ, ಸಕಲೇಶಪುರ ಪಟ್ಟಣದಲ್ಲಿ ಎಗ್ಗಿಲ್ಲದೆ ಜೂಜಾಟ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ವಿಷಯ ತಿಳಿದಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.