- Hassan|ಹಾಸನದ ಉದ್ದೂರು ಹೊಸಳ್ಳಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉಚಿತ ಯೋಜನೆಗಳು, ರಾಜ್ಯದ ಆರ್ಥಿಕ ಸ್ಥಿತಿ ಹಾಗೂ ಎಚ್.ಡಿ. ರೇವಣ್ಣ ಅವರ ಬಗ್ಗೆ ಅವರು ಆಡಿದ ಮಾತುಗಳ ಪೂರ್ಣ ವಿವರ ಇಲ್ಲಿದೆ.
Hassan|ಹಾಸನ: “ರಾಜ್ಯ ಸರ್ಕಾರ ನಿಮ್ಮ ತಲೆ ಮೇಲೆ ಒಬ್ಬೊಬ್ಬರಿಗೆ ತಲಾ ಒಂದು ಲಕ್ಷ ರೂಪಾಯಿ ಸಾಲ ಹೊರಿಸಿದೆ. ಕೇವಲ ಎರಡು ಸಾವಿರ ರೂಪಾಯಿ ಕೊಟ್ಟರೆ ಬದುಕು ಸಾಗಿಸಲು ಸಾಧ್ಯವೇ? ಆರೋಗ್ಯ ಚಿಕಿತ್ಸೆ ಪಡೆಯಲು ಆ ಹಣ ಸಾಕಾಗುತ್ತದೆಯೇ?” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ ಉದ್ದೂರು ಹೊಸಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಡಿಪಿ ಹೆಚ್ಚಳವಾಗುತ್ತಿದೆ, ಆದರೆ ಜನರ ಬದುಕಲ್ಲ!
ದೇಶವು ವಿಶ್ವದ ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೆ ಏರುತ್ತಿದೆ ಎಂದು ಹೆಮ್ಮೆಯಿಂದ ಹೇಳಿದ ಕುಮಾರಸ್ವಾಮಿ, ದೇಶದ ಆರ್ಥಿಕ ಪ್ರಗತಿಯ ನಡುವೆಯೂ ಹಳ್ಳಿಗಳ ಬಡತನದ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಜಿಡಿಪಿ ದರ ಹೆಚ್ಚಾಗುತ್ತಿದೆ ನಿಜ, ಆದರೆ ಸಾಮಾನ್ಯ ಜನರ ಬದುಕು ಬದಲಾಗುತ್ತಿದೆ ಎಂದು ಅದರ ಅರ್ಥವಲ್ಲ. ಒಂದು ಕಡೆ ಶ್ರೀಮಂತಿಕೆ ಇದೆ, ಮತ್ತೊಂದೆಡೆ ಹಳ್ಳಿಗಳಲ್ಲಿ ವಿಪರೀತ ಬಡತನವಿದೆ. ಜನರು ವಾರಾಂತ್ಯದಲ್ಲಿ ರೆಸಾರ್ಟ್, ಹೋಂಸ್ಟೇಗಳಿಗೆ ಹಣ ಖರ್ಚು ಮಾಡುತ್ತಿದ್ದಾರೆ, ಆದರೆ ನಮ್ಮ ಹಳ್ಳಿಗಳು ಆರ್ಥಿಕವಾಗಿ ಹಿಂದುಳಿದಿವೆ,” ಎಂದು ವಿಷಾದಿಸಿದರು.
ಕರ್ನಾಟಕಕ್ಕೂ ಹಿಮಾಚಲ ಪ್ರದೇಶದ ಸ್ಥಿತಿ ಬರಲಿದೆ!
ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ ಅವರು, “ಹಿಮಾಚಲ ಪ್ರದೇಶದಲ್ಲಿ ಉಚಿತ ವಿದ್ಯುತ್ ನೀಡಿ ಈಗ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲದಂತಾಗಿದೆ. ಅಲ್ಲಿ ನೌಕರರ ಅರ್ಧ ಸಂಬಳ ಕಟ್ ಮಾಡಲಾಗುತ್ತಿದೆ. ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಬರಲಿದೆ. ಈಗಾಗಲೇ ಇಲ್ಲಿನ ಸರ್ಕಾರಿ ನೌಕರರಿಗೆ ಮಾರ್ಚ್ ತಿಂಗಳ ಸಂಬಳ ಸರಿಯಾಗಿ ಪಾವತಿಯಾಗಿಲ್ಲ. ಈ ಸರ್ಕಾರ ಜನರ ಮೇಲೆ ಸಾಲದ ಹೊರೆ ಹೊರಿಸುತ್ತಿದೆ,” ಎಂದು ಕಿಡಿಕಾರಿದರು.
ಜಾತಿ ವ್ಯಾಮೋಹ ಬಿಡಿ, ಮಾನವೀಯತೆ ಇರಲಿ
ರಾಜಕೀಯ ಲಾಭಕ್ಕಾಗಿ ಜಾತಿ ಬಳಸುವುದನ್ನು ಖಂಡಿಸಿದ ಅವರು, “ಜಾತಿ ಎಂಬ ವ್ಯಾಮೋಹವನ್ನು ಬದಿಗಿಡಿ, ಅದರಿಂದ ಏನೂ ಸಿಗುವುದಿಲ್ಲ. ನಾನು ರಾಜಕೀಯಕ್ಕೆ ಬರಬೇಕು ಎಂಬ ಹಂಬಲ ಹೊಂದಿರಲಿಲ್ಲ, ಪರಿಸ್ಥಿತಿ ನನ್ನನ್ನು ಎಳೆದುಕೊಂಡು ಬಂದಿದೆ. ದೇವೇಗೌಡರ ಕನಸನ್ನು ಈಡೇರಿಸಲು ದೇವರು ನನಗೆ ಐದು ಬಾರಿ ಜೀವ ಕೊಟ್ಟಿದ್ದಾನೆ. ಕಷ್ಟ ಬಂದಾಗ ನಾವು ದೇವರಿಗೆ ಶರಣಾಗುತ್ತೇವೆ. ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯುವ ಶಕ್ತಿ ಬಡವರಿಗಿದೆಯೇ?” ಎಂದು ಭಾವನಾತ್ಮಕವಾಗಿ ಪ್ರಶ್ನಿಸಿದರು.
ರೇವಣ್ಣ ಭಕ್ತಿ ಮತ್ತು ಮುಂಗೋಪದ ಬಗ್ಗೆ ಮಾತು
ತಮ್ಮ ಸಹೋದರ ಎಚ್.ಡಿ. ರೇವಣ್ಣ ಅವರ ಬಗ್ಗೆ ಮಾತನಾಡುತ್ತಾ, “ರೇವಣ್ಣ ಈ ಜಿಲ್ಲೆಯಲ್ಲಿ ಅದೆಷ್ಟು ದೇವಾಲಯಗಳನ್ನು ಕಟ್ಟಿಸಿದ್ದಾರೋ ಗೊತ್ತಿಲ್ಲ. ಅವರ ಭಕ್ತಿ ಅಚಲವಾದುದು. ದೇವಾಲಯಕ್ಕೆ ಹೋಗಿ ಪ್ರಸಾದ ಸ್ವೀಕರಿಸುವವರೆಗೂ ಅವರು ಚಪ್ಪಲಿ ಹಾಕುವುದಿಲ್ಲ, ವಿಧಾನಸೌಧಕ್ಕೂ ಚಪ್ಪಲಿ ಇಲ್ಲದೆ ಬರುತ್ತಾರೆ. ಅವರ ಹೃದಯ ಶುದ್ಧವಾಗಿದೆ, ಆದರೆ ಅವರಿಗೆ ಮುಂಗೋಪ ಜಾಸ್ತಿ. ಅದನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಎಂದು ನಾನು ಹೇಳುತ್ತಲೇ ಇರುತ್ತೇನೆ, ಆದರೆ ಅವರು ಕೇಳುವುದಿಲ್ಲ,” ಎಂದು ಹಾಸ್ಯ ಚಟಾಕಿ ಹಾರಿಸಿದರು.
”ದೇವಾಲಯದಲ್ಲಿ ಕಲ್ಲಿನ ದೇವರು ಇದ್ದರೆ, ನನ್ನ ಮುಂದೆ ಕುಳಿತಿರುವ ನೀವೇ ನನಗೆ ನಿಜವಾದ ದೇವರು. ನಿಮ್ಮ ಗೌರವ ತರುವ ಕೆಲಸವನ್ನು ನಾನು ಯಾವಾಗಲೂ ಮಾಡುತ್ತೇನೆ,” ಎಂದು ಕುಮಾರಸ್ವಾಮಿ ಮತದಾರರಿಗೆ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ. ರೇವಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.










