5.8 C
Munich
Home ಜಿಲ್ಲೆ ಕಿರುಕುಳ ನಿಲ್ಲದಿದ್ದರೆ ಕೋರ್ಟ್ ಮೊರೆ; ಅರಣ್ಯ ಇಲಾಖೆ ಕಿರುಕುಳದ ವಿರುದ್ಧ ಮೂರ್ಕಣ್ಣು ಗುಡ್ಡ ಭಾಗದ ಜನರ...

ಕಿರುಕುಳ ನಿಲ್ಲದಿದ್ದರೆ ಕೋರ್ಟ್ ಮೊರೆ; ಅರಣ್ಯ ಇಲಾಖೆ ಕಿರುಕುಳದ ವಿರುದ್ಧ ಮೂರ್ಕಣ್ಣು ಗುಡ್ಡ ಭಾಗದ ಜನರ ಎಚ್ಚರಿಕೆ

ಅಚ್ಚನಹಳ್ಳಿ, ನಡಹಳ್ಳಿ, ಕಾಡುಮನೆ ಗುಡ್ಡ, ಜಂಬರಡಿ ಸೇರಿದಂತೆ ೮ ಗ್ರಾಮಗಳಿಗೆ ಯಾವುದೇ ಮೂಲಭೂತ ಸೌಕರ್ಯ ನೀಡುವುದು ಬೇಡ ಎಂದು ನೋಟಿಸ್

ಪತ್ರಿಕಾಗೋಷ್ಟಿಯಲ್ಲಿ ಹೋರಾಟ ಸಮಿತಿಯ ಯಜ್ಞೇಶ್, ಮಂಜುನಾಥ್, ನಾಗೇಶ್, ತಮ್ಮಣ್ಣ ಮೊದಲಾದವರಿದ್ದರು.

ಹಾಸನ: ಸಕಲೇಶಪುರ ತಾಲೂಕಿನ ಮೂರ್ಕಣ್ಣು ಗುಡ್ಡದಲ್ಲಿ ವಾಸಿಸುತ್ತಿರುವ ಸುಮಾರು ೮ ಗ್ರಾಮಗಳ ನಿವಾಸಿಗಳಿಗೆ ಅರಣ್ಯ ಇಲಾಖೆಯವರು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಹೋರಾಟ ಸಮಿತಿ ಸದಸ್ಯ ಬಿ.ಕೆ.ಸುಂದರೇಶ್ ಆರೋಪಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಲಾ ತಲಾಂತರ ಗಳಿಂದ ನಮ್ಮ ಪೂರ್ವಜರು ಅಲ್ಲಿಯೇ ಬದುಕು ಕಟ್ಟಿಕೊಂಡು ಬಂದಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಸೆಕ್ಷನ್ ೪ ಅಡಿ, ಇದು ಮೀಸಲು ಅರಣ್ಯ ಭೂಮಿ, ನೀವು ತೆರವು ಮಾಡಿ ಎಂದು ನೋಟಿಸ್ ಜಾರಿ ಮಾಡುವ ಮೂಲಕ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
೧೯೨೦ ರಲ್ಲಿ ಮೈಸೂರು ಮಹಾರಾಜರು ಇಲ್ಲಿಗೆ ಬಂದು ಮೀಸಲು ಅರಣ್ಯ ಎಂದು ಹೇಳಿದ್ದರಂತೆ. ಅದಾದ ಬಳಿಕ ೧೯೨೪ ರಲ್ಲಿ ಅರಣ್ಯಾಧಿಕಾರಿಯೊಬ್ಬರು ವರದಿ ಸಲ್ಲಿಸಿ ಇದು ಅರಣ್ಯ ಪೋಷಣೆಗೆ ಸೂಕ್ತವಾದ ಜಾಗ ಅಲ್ಲ ಎಂದು ಹೇಳಿದ್ದಾರೆ.
ಈ ವರದಿಯನ್ನು ಗಣನೆ ಮಾಡದ ಅರಣ್ಯಾಧಿಕಾರಿಗಳು ತೆರವು ಮಾಡಿ ಎಂದು ಪದೇ ಪದೇ ತೊಂದರೆ ಕೊಡುತ್ತಿದ್ದಾರೆ, ಬೆಂಬಿಡದ ಭೂತವಾಗಿ ಕಾಡುತ್ತಿದ್ದಾರೆ. ಕೆಲವರ ಬಳಿ ಪಕ್ಕಾ ದಾಖಲೆ ಇದ್ದರೂ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಈ ಸಂಬAಧ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವರು, ಕಂದಾಯ ಸಚಿವರು ಸೇರಿದಂತೆ ಅನೇಕರಿಗೆ ಮನವಿ ಸಲ್ಲಿಸಿದ್ದೇವೆ. ಅವರಿಂದ ತೆರವು ಮಾಡಲು ಅವಕಾಶ ನೀಡುವುದಿಲ್ಲ ಎಂಬ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.
ಆರಂಭದಿAದಲೂ ಈವರೆಗೆ ೮ ಗ್ರಾಮಗಳ ವ್ಯಾಪ್ತಿಯಲ್ಲಿ ಯಾವುದೇ ಘರ್ಷಣೆ ಆಗಿಲ್ಲ. ಮೂರ್ಕಣ್ಣು ಗುಡ್ಡ ಪ್ರದೇಶ ಸುಮಾರು ೮ ಸಾವಿರ ಎಕರೆ ಪ್ರದೇಶದಲ್ಲಿದ್ದು, ೧೫೦೦ ಎಕರೆ ಭಾಗವನ್ನು ಖಾಲಿ ಮಾಡಿ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ನಮಗೆ ನೋಟಿಸ್ ಕೊಡುವುದು ಒಂದೆಡೆಯಾದರೆ, ಸ್ಥಳೀಯ ಗ್ರಾಮ ಪಂಚಾಯ್ತಿಗಳಿಗೂ ನೋಟಿಸ್ ನೀಡಿ ಅಚ್ಚನಹಳ್ಳಿ, ನಡಹಳ್ಳಿ, ಕಾಡುಮನೆ ಗುಡ್ಡ, ಜಂಬರಡಿ ಸೇರಿದಂತೆ ೮ ಗ್ರಾಮಗಳಿಗೆ ಯಾವುದೇ ಮೂಲಭೂತ ಸೌಕರ್ಯ ನೀಡುವುದು ಬೇಡ ಎಂದು ಹೇಳುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಮನವಿ ಮಾಡಿದರು.
ನಮ್ಮ ಆಗ್ರಹ ಏನೆಂದರೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿಸಿ ಕಳೆದ ಹಲವು ದಶಕಗಳಿಂದ ನಮ್ಮನ್ನು ಕಾಡುತ್ತಿರುವ ಸಮಸ್ಯೆಯನ್ನು ಬಗೆಹರಿಸಿ ಎಂದು ಮನವಿ ಮಾಡಿದರು.
ನಮಗೆ ಆಗುತ್ತಿರುವ ಸಮಸ್ಯೆ ತಪ್ಪಿಸಿ ಎಂದು ನಾವು ಅನೇಕರಿಗೆ ಮನವಿ ಸಲ್ಲಿಸಿದ್ದೇವೆ, ಪರಿ ಪರಿಯಾಗಿ ಕೇಳಿ ಕೊಂಡಿದ್ದೇವೆ. ಇನ್ನಾದರೂ ಇದಕ್ಕೆ ಮುಕ್ತಿ ಕಾಣಿಸದೇ ಇದ್ದರೆ ಅಂತಿಮವಾಗಿ ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಹೋರಾಟ ಸಮಿತಿಯ ಯಜ್ಞೇಶ್, ಮಂಜುನಾಥ್, ನಾಗೇಶ್, ತಮ್ಮಣ್ಣ ಮೊದಲಾದವರಿದ್ದರು.

error: Content is protected !!