9 C
Munich
Home ಜಿಲ್ಲೆ Hassan|ಮಾಡಾಳು: ಇತಿಹಾಸ ಪ್ರಸಿದ್ಧ ಸ್ವರ್ಣ ಗೌರಮ್ಮ ದೇವಾಲಯದಲ್ಲಿ ಭಕ್ತಿಭಾವದ ಅಮಾವಾಸ್ಯೆ ವಿಶೇಷ ಪೂಜೆ

Hassan|ಮಾಡಾಳು: ಇತಿಹಾಸ ಪ್ರಸಿದ್ಧ ಸ್ವರ್ಣ ಗೌರಮ್ಮ ದೇವಾಲಯದಲ್ಲಿ ಭಕ್ತಿಭಾವದ ಅಮಾವಾಸ್ಯೆ ವಿಶೇಷ ಪೂಜೆ

  • ಇತಿಹಾಸ ಪ್ರಸಿದ್ಧ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಕೋಡಿಮಠ ಶ್ರೀಗಳ ಸಂಕಲ್ಪದಂತೆ ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಅನ್ನದಾಸೋಹ ಭಕ್ತಿಭಾವದಿಂದ ಜರುಗಿತು.

Hassanಹಾಸನ (Kannada Post):ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಮಾಡಾಳು ಗ್ರಾಮದ ಮೂಲಸ್ಥಾನ ‘ಸ್ವರ್ಣ ಗೌರಮ್ಮ ದೇವಿ’ ದೇವಾಲಯದಲ್ಲಿ ಶುಕ್ರವಾರ ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿ ಅಮಾವಾಸ್ಯೆಯ ವಿಶೇಷ ಪೂಜಾ ಕೈಂಕರ್ಯಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ, ಅದ್ದೂರಿಯಾಗಿ ಜರುಗಿದವು.

ಅಲಂಕೃತ ಮಾಡಾಳು ಗೌರಮ್ಮ

ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಂಕಲ್ಪದಂತೆ, ಲೋಕ ಕಲ್ಯಾಣಾರ್ಥವಾಗಿ ಪ್ರತಿ ತಿಂಗಳ ಅಮಾವಾಸ್ಯೆಯಂದು ಇಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಂತೆ ಈ ಬಾರಿಯೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅಮ್ಮನವರಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸಲಾಯಿತು.

ಕಣ್ಮನ ಸೆಳೆದ ದೇವಾಲಯದ ಸಿಂಗಾರ:
ಅಮಾವಾಸ್ಯೆ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ದೇವಾಲಯವನ್ನು ತಳಿರು ತೋರಣ ಹಾಗೂ ಬಾಳೆ ಕಂದುಗಳಿಂದ ಸುಂದರವಾಗಿ ಶೃಂಗರಿಸಲಾಗಿತ್ತು. ಇಡೀ ದೇವಾಲಯಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದ್ದು, ಇದು ಭಕ್ತರ ಕಣ್ಮನ ಸೆಳೆಯುವಂತಿತ್ತು. ಪೂಜೆಯ ಅಂಗವಾಗಿ ಸ್ವರ್ಣ ಗೌರಮ್ಮ ದೇವಿಯ ಭಾವಚಿತ್ರವನ್ನು ಬಗೆ ಬಗೆಯ ಸುಗಂಧ ಭರಿತ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಮಹಾಮಂಗಳಾರತಿ ಮತ್ತು ಪೂಜಾ ವಿಧಿವಿಧಾನ
ಶುಕ್ರವಾರ ರಾತ್ರಿ 8:30 ಗಂಟೆಗೆ ಸರಿಯಾಗಿ ಕೋಡಿಮಠದ ಮಹಾತಪಸ್ವಿ, ಲಿಂಗೈಕ್ಯ ಶಿವಲಿಂಗಜ್ಜಯ್ಯ ಅವರ ಮೂರ್ತಿಗೆ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಕರ್ಪೂರದಾರತಿಯ ಮೂಲಕ ಮಹಾಮಂಗಳಾರತಿಯನ್ನು ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು.

ಶೆಟ್ರು ವಂಶಸ್ಥರಿಂದ ಅನ್ನದಾಸೋಹ
ದೂರದೂರುಗಳಿಂದ ಆಗಮಿಸಿದ್ದ ನೂರಾರು ಭಕ್ತಾದಿಗಳಿಗೆ ಕಿತ್ತನಕೆರೆ ಗ್ರಾಮದ ಶೆಟ್ರು ವಂಶಸ್ಥರ ವತಿಯಿಂದ ಅಚ್ಚುಕಟ್ಟಾದ ಅನ್ನದಾಸೋಹ (ಪ್ರಸಾದ) ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು.

ಹರಿದುಬಂದ ಭಕ್ತ ಸಾಗರ:
ಈ ವಿಶೇಷ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಳ್ಳಲು ಮಾಡಾಳು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಾದ ಸೀತಾಪುರ ಕೊಪ್ಪಲು, ಎರೆಹಳ್ಳಿ, ವೈ.ಜಿ. ಹಳ್ಳಿ, ದಿಬ್ಬೂರು, ಶಶಿವಾಳ, ಡಿ.ಎಂ. ಕುರ್ಕೆ, ಆರ್. ಹೊಸಳ್ಳಿ, ಕಿತ್ತನಕೆರೆ, ದೋಣನಕಟ್ಟೆ, ಬೊಮ್ಮಸಮುದ್ರ, ಶಂಕರನಹಳ್ಳಿ, ಕಡಲಮಗೆ ಮುಂತಾದ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಎಲ್ಲರೂ ದೇವಿಯ ದರ್ಶನ ಪಡೆದು ಪುನೀತರಾದರು.

error: Content is protected !!