Hassan: ಜಿಲ್ಲೆಯ ಜಲ ಜೀವನ್ ಮಿಷನ್: ಬಾಕಿ ಅನುದಾನ ಬಿಡುಗಡೆಗೆ ಆಗ್ರಹಿಸಿ ಕೇಂದ್ರ ಸಚಿವರಿಗೆ ಸಂಸದ ಶ್ರೇಯಸ್ ಪಟೇಲ್ ಮನವಿ

  • ಹಾಸನ ಜಿಲ್ಲೆಯ ಜಲ ಜೀವನ್ ಮಿಷನ್ (JJM) ಕಾಮಗಾರಿಗಳ 64,043 ಲಕ್ಷ ರೂ. ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಸಂಸದ ಶ್ರೇಯಸ್ ಎಂ. ಪಟೇಲ್ ಮನವಿ.

ನವದೆಹಲಿ: (Hassan)ಹಾಸನ ಜಿಲ್ಲೆಯಲ್ಲಿ  ಜಲ ಜೀವನ್ ಮಿಷನ್ (JJM) ಯೋಜನೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಕೇಂದ್ರ ಸರ್ಕಾರದ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

​ಕೇಂದ್ರ ಸಚಿವರಿಗೆ  ಮನವಿ ಪತ್ರ ಹಸ್ತಾಂತರಿಸಿದ ಸಂಸದರು, ಹಾಸನ ಜಿಲ್ಲೆಯ ಜಲ ಜೀವನ್ ಮಿಷನ್ ಕಾಮಗಾರಿಗಳ ಪ್ರಸ್ತುತ ಸ್ಥಿತಿಗತಿಯನ್ನು ವಿವರಿಸಿದರು. ಜಿಲ್ಲೆಗೆ ಕೇಂದ್ರದಿಂದ ಒಟ್ಟು 1,04,491.17 ಲಕ್ಷ ರೂ. ಅಂದಾಜು ಅನುದಾನ ನಿಗದಿಯಾಗಿದ್ದು, ಈವರೆಗೆ ಕೇವಲ 40,448.15 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಉಳಿದ 64,043.02 ಲಕ್ಷ ರೂ.ಗಳ ಬೃಹತ್ ಮೊತ್ತ ಇನ್ನೂ ಬಿಡುಗಡೆಯಾಗಬೇಕಿದೆ ಎಂದು ಅವರು ಸಚಿವರ ಗಮನಕ್ಕೆ ತಂದರು.

ತಕ್ಷಣದ ಅಗತ್ಯ: 15,906.05 ಲಕ್ಷ ರೂ.

ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಬಾಕಿ ಬಿಲ್‌ಗಳನ್ನು ಪಾವತಿಸಲು ತಕ್ಷಣವೇ 15,906.05 ಲಕ್ಷ ರೂ.ಗಳ ಅಗತ್ಯವಿದೆ ಎಂದು ಸಂಸದರು ಒತ್ತಿ ಹೇಳಿದರು. ಕೇಂದ್ರದಿಂದ ಅನುದಾನ ಬಿಡುಗಡೆಯಾಗುವುದು ವಿಳಂಬವಾಗಿರುವುದರಿಂದ ಕಾಮಗಾರಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದಾಗಿ ಗ್ರಾಮೀಣ ಭಾಗದ ಮನೆಗಳಿಗೆ ನಿಗದಿತ ಸಮಯದೊಳಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಗುರಿ ಸಾಧನೆಗೆ ಹಿನ್ನಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

​ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ಮತ್ತು ಹೆಚ್ಚಿನ ವಿಳಂಬವನ್ನು ತಪ್ಪಿಸಲು ಬಾಕಿ ಇರುವ ಕೇಂದ್ರ ಅನುದಾನವನ್ನು, ವಿಶೇಷವಾಗಿ ತಕ್ಷಣದ ಅಗತ್ಯವಿರುವ ಮೊತ್ತವನ್ನು ಆದ್ಯತೆಯ ಮೇರೆಗೆ ಬಿಡುಗಡೆ ಮಾಡುವಂತೆ ಅವರು ಕೇಂದ್ರ ಜಲಶಕ್ತಿ ಸಚಿವರಲ್ಲಿ ವಿನಂತಿಸಿದ್ದಾರೆ.

ಸಚಿವರಿಗೆ ಸಂಸದ ಶ್ರೇಯಸ್ ಸಲ್ಲಿಸಿದ ಮನವಿ ಪ್ರತಿ