ಸಕಲೇಶಪುರ, ಏಪ್ರಿಲ್,17,2026(www.kannadapost.com): ತಾಲೂಕಿನಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಸಮಾಜದ ಎಲ್ಲಾ ವರ್ಗಗಳನ್ನು ಒಂದೇ ವೇದಿಕೆಯಲ್ಲಿ ತರಲು “ಡ್ರಗ್ಸ್ ಮುಕ್ತ ಸಕಲೇಶಪುರ” ಆಂದೋಲನದ ವತಿಯಿಂದ ಏಪ್ರಿಲ್ 19ರಂದು ಸಂಜೆ 6:30ಕ್ಕೆ ನಾಡಪ್ರಭು ಕೆಂಪೇಗೌಡ ಪ್ರತಿಮೆ ಆವರಣದಲ್ಲಿ ಸನ್ಮಾನ, ಪುಸ್ತಕ ಬಿಡುಗಡೆ ಹಾಗೂ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಂದೋಲನದ ಸಂಚಾಲಕ ಮಲ್ನಾಡ್ ಮೆಹಬೂಬ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಶಿಷ್ಟ ಕಾರ್ಯಕ್ರಮದಲ್ಲಿ ರಾಜ್ಯ ಅಂಬೇಡ್ಕರ್ ಪ್ರಶಸ್ತಿ ವಿಜೇತ ದಲಿತ ಮುಖಂಡ ಹೆತ್ತೂರು ಅಣ್ಣಯ್ಯ ಅವರಿಗೆ ಸನ್ಮಾನ ನಡೆಯಲಿದೆ. ಯುವ ಲೇಖಕಿ ಕುಮಾರಿ ಡಯಾನಾ ಡಿಸೋಜ ಅವರ ಚೊಚ್ಚಲ ಕೃತಿ “ಅಂತರಂಗದ ಗುಟ್ಟು” ಹಾಗೂ ಸಾಹಿತಿ ವಿಶ್ವಾಸ್ ಗೌಡ ಅವರ 10ನೇ ಕೃತಿ “ದೇವರನ್ನು ಹುಡುಕಬೇಕಾಗಿದೆ” ಪುಸ್ತಕಗಳ ಬಿಡುಗಡೆ ನಡೆಯಲಿದೆ. ಜೊತೆಗೆ ಸಂಗೀತ ಸಂಜೆ ಕಾರ್ಯಕ್ರಮವೂ ಆಯೋಜಿಸಲಾಗಿದೆ ಎಂದು ಹೇಳಿದರು.
ಹಿರಿಯ ಹೋರಾಟಗಾರ ನಾರಾಯಣ ಆಳ್ವ ಮಾತನಾಡಿ, ಡ್ರಗ್ಸ್ ಎಂಬುದು ಯುವಜನತೆಯ ಭವಿಷ್ಯವನ್ನೇ ಹಾಳು ಮಾಡುವ ಮಹಾಮಾರಿ. ಇದನ್ನು ತಡೆಯಲು ಸಮಾಜದ ಎಲ್ಲಾ ವರ್ಗಗಳು ಕೈಜೋಡಿಸಬೇಕು. ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಕ್ರೀಡೆಗಳ ಒಗ್ಗಟ್ಟಿನಿಂದಲೇ ಈ ಹೋರಾಟ ಯಶಸ್ವಿಯಾಗುತ್ತದೆ. ಈ ಕಾರ್ಯಕ್ರಮ ಕೇವಲ ಸಮಾರಂಭವಲ್ಲ, ಜಾಗೃತಿ ಚಳುವಳಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಯೋಗೇಶ್ ಮಾತನಾಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರು ಹಾಗೂ ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖರಾದ ಹೆಚ್.ಎಂ. ವಿಶ್ವನಾಥ್ ವಹಿಸಲಿದ್ದಾರೆ. ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ರಂಗಕರ್ಮಿ ಪ್ರಸಾದ್ ರಕ್ಷಿದಿ ಪುಸ್ತಕಗಳ ಕುರಿತು ಮಾತನಾಡಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸುಪ್ರೀತಾ, ಡಿ.ವೈ.ಎಸ್.ಪಿ ಮಾಲತೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಾಗರೀಕರ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿ ಕುಮಾರ್ ಮಾತನಾಡಿ, ತಾಲೂಕಿನ ವಿವಿಧ ಸಂಘಟನೆಗಳು, ಸಾಹಿತ್ಯಿಕರು, ಪತ್ರಕರ್ತರು, ಕಾರ್ಮಿಕ ಸಂಘಗಳು ಹಾಗೂ ಮಹಿಳಾ ಸಂಘಟನೆಗಳು ಸಹಕರಿಸುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.










