10.8 C
Munich
Home ಕ್ರೈಮ್‌ ರೇವಣ್ಣ ಆಪ್ತನ ಮೇಲೆ ಅಟ್ಯಾಕ್ ಪ್ರಕರಣ: ಪೊಲೀಸರಿಂದ ತನಿಖೆ ಚುರುಕು

ರೇವಣ್ಣ ಆಪ್ತನ ಮೇಲೆ ಅಟ್ಯಾಕ್ ಪ್ರಕರಣ: ಪೊಲೀಸರಿಂದ ತನಿಖೆ ಚುರುಕು

ಶೀಘ್ರ ಕಿಡಿಗೇಡಿಗಳ ಬಂಧನ ಎಂದ ಸಚಿವ ರಾಜಣ್ಣ

ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಮತ್ತೊಬ್ಬ ಆಪ್ತನ ಮೇಲೆ
ಅಟ್ಯಾಕ್ ಪ್ರಕರಣ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ
ಎಡೆ ಮಾಡಿಕೊಟ್ಟಿದೆ.
ಕೆಲ ತಿಂಗಳ ಹಿಂದೆ ರೇವಣ್ಣ ಆಪ್ತ, ಗ್ರಾನೈಟ್ ಉದ್ಯಮಿ ಹಾಸನದ ಕೃಷ್ಣೇಗೌಡ ಹತ್ಯೆಯಾಗಿದ್ದರು. ಆ ಘಟನೆ ಮಾಸುವ ಮುನ್ನವೇ ಕಳೆದ ರಾತ್ರಿ, ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಮಾಜಿ ಸಚಿವ ಅತ್ಯಾಪ್ತ ಅಶ್ವಥ್ ನಾರಾಯಣ ಹತ್ಯೆಗೆ ಯತ್ನ ನಡೆದಿದೆ. ಈ ಬೆಳವಣಿಗೆ ರೇವಣ್ಣ ಅವರ ಇತರೆ ಆಪ್ತರಲ್ಲಿ ಕಳವಳ ತರಿಸಿದೆ.
ಕಳೆದ ರಾತ್ರಿ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಅಶ್ವತ್ ಅವರು ಫಾರ್ಚುನರ್ ಕಾರಿನಲ್ಲಿ ಹೋಗುತ್ತಿದ್ದಾಗ ಮರ‍್ನಾಲ್ಕು ಮಂದಿ ಇದ್ದ ಗುಂಪು ದಿಢೀರ್ ಅಟ್ಯಾಕ್ ಮಾಡಿತ್ತು. ಕೂದಲೆಳೆ ಅಂತರದಲ್ಲಿ ಗುತ್ತಿಗೆದಾರ ಪಾರಾಗಿದ್ದಾರೆ.
ಕೊಲೆ ಯತ್ನ ಕೇಸ್:
ಈ ಸಂಬoಧ ಹೊಳೆನರಸೀಪುರ ನಗರ ಠಾಣೆಯಲ್ಲಿ ಕಾರು ಅಡ್ಡಗಟ್ಟಿ ದಾಳಿ ಮತ್ತು
ಕೊಲೆ ಯತ್ನ ಕೇಸ್ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷೆನ್ ೩೦೭, ೩೪೧, ೪೨೭ ಅಡಿ ಕೇಸ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡುತ್ತಿದ್ದಾರೆ.
ವಿಶೇಷ ತಂಡ ರಚನೆ:
ಘಟನೆ ನಡೆದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಪಡೆದಿರುವ
ಎಸ್ಪಿ ಮೊಹಮದ್ ಸುಜೀತಾ ಅವರು, ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಎಸ್ಪಿ, ಮೂವರು ಅಟ್ಯಾಕ್ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಅವರ ಬಗ್ಗೆ ಮಾಹಿತಿ ಇಲ್ಲ. ಅಶ್ವಥ್ ಅವರಿಗೆ ರಕ್ಷಣೆ ನೀಡುತ್ತೇವೆ ಎಂದರು.
ಮಧ್ಯೆ ಪ್ರವೇಶ ಮಾಡಲ್ಲ:
ಅಶ್ವಥ್ ಅವರ ಮೇಲೆ ಅಟ್ಯಾಕ್ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಮಧ್ಯೆ ಪ್ರವೇಶ ಮಾಡಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಸಮಯಪ್ರಜ್ಞೆಯಿಂದ ಅಶ್ವಥ್ ಅವರು ಪಾರಾಗಿದ್ದಾರೆ.
ಈ ಬಗ್ಗೆ ತನಿಖೆ ಮಾಡಲಿ ಆಮೇಲೆ ನೋಡೋಣ. ಎಸ್ಪಿ ಹೊಸದಾಗಿ ಬಂದಿದ್ದಾರೆ.
ತನಿಖೆ ಮಾಡುವಾಗ ಮಧ್ಯಪ್ರವೇಶ ಮಾಡಲ್ಲ. ಸಿಸಿಟಿವಿಯಲ್ಲಿ ಕಾರುಗಳ ದೃಶ್ಯ ಸೆರೆಯಾಗಿದೆ ಅಂತ ಪೊಲೀಸರು ಹೇಳ್ತಿದ್ದಾರೆ. ಆರೋಪಿಗಳು ದಪ್ಪಗೆ ದಷ್ಟಪುಷ್ಟವಾಗಿದ್ದರು ಅಂತ ನಮ್ಮ ಹುಡುಗರು ಹೇಳಿದ್ದಾರೆ. ನಮ್ಮ ಎಂಎಲ್‌ಸಿ ಅವರಿಗೆ ಭದ್ರತೆ ಕೊಡಿ ಎಂದು ಹೇಳಿದ್ದೇನೆ.
ಏಕೆಂದರೆ ಅವರು ಅಲ್ಲೇ ತೋಟದಲ್ಲಿ ಇರ್ತಾರೆ ಎಂದರು.
ತನಿಖೆ ಹಂತದಲ್ಲಿದೆ: ರಾಜಣ್ಣ
ರೇವಣ್ಣ ಆಪ್ತನ ಮೇಲೆ ಅಟ್ಯಾಕ್ ವಿಚಾರವಾಗಿ ಮಾತನಾಡಿದ ಸಚಿವ ರಾಜಣ್ಣ, ಅದು ತನಿಖೆ ಹಂತದಲ್ಲಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡಿ, ಆರೋಪಿಗಳನ್ನು ಹಿಡಿದು ಕಾನೂನಿನ್ವಯ ವಿಚಾರಣೆಗೆ ಒಳಪಡಿಸುತ್ತೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಈ ರೀತಿ ದಾಳಿ ಮಾಡುವುದು, ದೌರ್ಜನ್ಯ ಮಾಡುವುದನ್ನು ಖಂಡಿಸುತ್ತೇನೆ. ನಮ್ಮ ಅಧಿಕಾರಿಗಳು ಸಶಕ್ತರಿದ್ದಾರೆ. ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದು ಉತ್ತರಿಸಿದರು. ಗುತ್ತಿಗೆದಾರ ಕೃಷ್ಣೇಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನೂ ಬಂಧಿಸದೇ ಇರುವ ಬಗ್ಗೆ ಹಾಗಂತ ಪೊಲೀಸರು ಹುಡುಕುತ್ತಿಲ್ಲ ಅಂತ ಅಲ್ಲ, ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲು ಆಗಲ್ಲ. ಉಳಿದಿರುವ ಇಬ್ಬರು ಆರೋಪಿಗಳನ್ನು ಬಂಧಿಸಲು ವಿಶೇಷ ಟೀಂ ಮಾಡಲಾಗಿದೆ. ನನಗೆ ವಿಶ್ವಾಸ ಇದೆ, ಅವರನ್ನು ಬಂಧಿಸಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

error: Content is protected !!