Hassan:ಕಾಡಾನೆ ದಾಳಿಗೆ ರೈತ ಬಲಿ; ಸೊಂಡಿಲಿನಿಂದ ಎತ್ತಿ ಬಿಸಾಡಿ, ತುಳಿದು ಕೊಂದ ಆನೆ

Hassan ಜಿಲ್ಲೆ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆ ದಾಳಿಗೆ 65 ವರ್ಷದ ರೈತ ರಾಜಶೆಟ್ಟಿ ಬಲಿಯಾಗಿದ್ದಾರೆ. ತೋಟಕ್ಕೆ ತೆರಳಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಆನೆ, ತುಳಿದು ಸಾಯಿಸಿದೆ.

Hassan|ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ಕಾಡಾನೆಯೊಂದು ರೈತನ ಮೇಲೆ ದಾಳಿ ನಡೆಸಿ ಸಾಯಿಸಿರುವ ದಾರುಣ ಘಟನೆ ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಇಂದು (ಭಾನುವಾರ) ಬೆಳಿಗ್ಗೆ ನಡೆದಿದೆ.

​ಕಣಗುಪ್ಪೆ ಗ್ರಾಮದ ನಿವಾಸಿ ರಾಜಶೆಟ್ಟಿ (65) ಕಾಡಾನೆ ದಾಳಿಯಿಂದ ಮೃತಪಟ್ಟ ದುರ್ದೈವಿ ರೈತ. ಇಂದು ಮುಂಜಾನೆ ರಾಜಶೆಟ್ಟಿ ಅವರು ತಮ್ಮ ತೋಟಕ್ಕೆ ಕೆಲಸಕ್ಕಾಗಿ ತೆರಳಿದ್ದರು. ಈ ವೇಳೆ ಪೊದೆಯೊಳಗೆ ಅಡಗಿದ್ದ ಕಾಡಾನೆ ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ.

ಸೊಂಡಿಲಿನಿಂದ ಎತ್ತಿ ಬಿಸಾಡಿ ಹತ್ಯೆ:

ರೈತ ರಾಜಶೆಟ್ಟಿ ಅವರ ಮೇಲೆರಗಿದ ಕಾಡಾನೆ, ತನ್ನ ಸೊಂಡಿಲಿನಿಂದ ಅವರನ್ನು ಎತ್ತಿ ರಭಸವಾಗಿ ಬಿಸಾಡಿದೆ. ಅಷ್ಟಕ್ಕೇ ನಿಲ್ಲದ ಆನೆ, ನೆಲಕ್ಕೆ ಬಿದ್ದ ರೈತನನ್ನು ಕಾಲಿನಿಂದ ತುಳಿದು ಬರ್ಬರವಾಗಿ ಸಾಯಿಸಿದೆ. ಘಟನೆ ನಡೆದ ನಂತರವೂ ಕಾಡಾನೆಯು ಮೃತದೇಹದ ಸ್ವಲ್ಪ ದೂರದಲ್ಲೇ ಬೀಡು ಬಿಟ್ಟಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ:

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾಡಾನೆಯನ್ನು ಅಲ್ಲಿಂದ ಓಡಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಘಟನೆಯು ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರು ಕಾಡಾನೆಗಳ ಹಾವಳಿಯಿಂದ ತಮಗೆ ರಕ್ಷಣೆ ನೀಡುವಂತೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.