Hassan|ಹಾಸನ, ಏ.5: ಅರಸೀಕೆರೆ ಪಟ್ಟಣದಲ್ಲಿ ದಂಪತಿ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ.
ಏಪ್ರಿಲ್ 3ರಂದು ನಡೆದ ಈ ಘಟನೆಯಲ್ಲಿ, ಬೈಕ್ ಓವರ್ಟೇಕ್ ಮಾಡುವ ವೇಳೆ ಟಚ್ ಆದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ತಿಪಟೂರು ಮೂಲದ ದಂಪತಿ ಮೇಲೆ ಹಲ್ಲೆ ನಡೆದಿದೆ. ಈ ಹಲ್ಲೆಯನ್ನು ಸೂಫಿಯಾನ್ ಮತ್ತು ಇತರರು ನಡೆಸಿರುವುದು ತಿಳಿದುಬಂದಿದೆ.
ಸೂಫಿಯಾನ್ ಅರಸೀಕೆರೆ ನಗರಸಭೆಯ ಮಾಜಿ ಅಧ್ಯಕ್ಷ ಸುಮೀವುಲ್ಲಾ ಅವರ ಪುತ್ರನಾಗಿರುವುದು ವಿಶೇಷವಾಗಿದೆ.
ಘಟನೆ ಬಳಿಕ ಪೊಲೀಸರು ದಂಪತಿ ಮತ್ತು ಸೂಫಿಯಾನ್ ಅವರನ್ನು ಪತ್ತೆಹಚ್ಚಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಎರಡು ಕಡೆಯಿಂದಲೂ ತಪ್ಪಾಗಿದೆ ಎಂದು ಹೇಳಿ ದಂಪತಿ ಯಾವುದೇ ದೂರು ನೀಡದೇ ತೆರಳಿದ್ದರು.
ಆದರೆ, ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದವು.
ಈ ಹಿನ್ನೆಲೆಯಲ್ಲಿ ಅರಸೀಕೆರೆ ಪಿಎಸ್ಐ ದಿಲೀಪ್ಕುಮಾರ್ ಎಚ್.ಎಂ. ನೀಡಿದ ದೂರಿನ ಮೇರೆಗೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.










