Kodimatha: ಕೋಡಿಮಠದಲ್ಲಿ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ: ಸಾವಿರಾರು ಮುತ್ತೈದೆಯರಿಗೆ ಉಡಿತುಂಬಿ ಬಾಗಿನ ಸತ್ಕಾರ

ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠದಲ್ಲಿ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಆರಂಭವಾಗಿದೆ. ಸಾವಿರಾರು ಮುತ್ತೈದೆಯರಿಗೆ ಉಡಿತುಂಬಿ, ಬಾಗಿನ ನೀಡಿ ಸತ್ಕರಿಸಲಾಯಿತು.

ಅರಸೀಕೆರೆ, ಮಾರ್ಚ್ 4: ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ kodimatha ಕೋಡಿಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ದೊರೆತಿದೆ. ಜಾತ್ರಾ ಮಹೋತ್ಸವದ ಮೊದಲ ದಿನ ಸಾವಿರಾರು ಮುತ್ತೈದೆಯರಿಗೆ ಉಡಿತುಂಬಿ, ಮಡಿಲಕ್ಕಿ, ಕುಂಕುಮ ನೀಡಿ ಬಾಗಿನ ಕೊಟ್ಟು ಸತ್ಕರಿಸಲಾಯಿತು.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಾತಿ–ಮತ–ಪಂಥ ಭೇದವಿಲ್ಲದೆ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಸಾವಿರಾರು ಹೆಂಗೆಳೆಯರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಠದ ಶ್ರೀಗಳಿಂದ ಆಶೀರ್ವಾದ ಪಡೆದು ಸಂಭ್ರಮಿಸಿದರು.

ಹೆಣ್ಣು ಮಕ್ಕಳಿಗೆ ವಿಶೇಷ ಗೌರವ

ಮಠದ ಶ್ರೀಗಳಾದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಅರಿಶಿನ, ಕುಂಕುಮ, ಹೂವು, ಬಳೆ ಹಾಗೂ ಸೀರೆ ನೀಡಿ ಮಹಿಳೆಯರನ್ನು ಗೌರವಿಸಿದರು.

ಈ ವೇಳೆ ಮಾತನಾಡಿದ ಅವರು, “ಮಠಕ್ಕೆ ಬರುವ ಪ್ರತಿಯೊಂದು ಹೆಣ್ಣು ಮಗಳನ್ನೂ ಪಾರ್ವತಿ ಸಮಾನವಾಗಿ ಕಾಣುವುದು ನಮ್ಮ ಸಂಪ್ರದಾಯ. ಮುತ್ತೈದೆಯರಿಗೆ ಬಾಗಿನ ನೀಡುವುದು ಮಹಿಳೆಯರಿಗೆ ಗೌರವ ಸಲ್ಲಿಸುವ ಮಠದ ಸಂಪ್ರದಾಯವಾಗಿದೆ,” ಎಂದು ಹೇಳಿದರು.

ಮಹಿಳೆಯರನ್ನು ಸಮಾಜದಲ್ಲಿ ಮುನ್ನಲೆಗೆ ತರುವುದು ಮತ್ತು ಪುರುಷರಿಗೆ ಸಮಾನ ಸ್ಥಾನವಿದೆ ಎಂಬ ಸಂದೇಶ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಶ್ರೀಗಳು ತಿಳಿಸಿದರು.

ಅನ್ನಸಂತರ್ಪಣೆ

ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಮನೆ ಮನೆಗೆ ಭಿಕ್ಷಾಟನೆ

ಗುರುವಾರ ಮಹಾಸ್ವಾಮೀಜಿ ಕೋಡಿಮಠ ಹಾಗೂ ಹಾರನಹಳ್ಳಿ ಗ್ರಾಮ ಪ್ರವೇಶಿಸಿ ಭಕ್ತರ ಮನೆಗಳಿಗೆ ತೆರಳಿ ಭಿಕ್ಷಾಟನೆ ನಡೆಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಶಾಸಕ ಶಿವಲಿಂಗೇಗೌಡ ಪ್ರಶಂಸೆ

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ, ಕೋಡಿಮಠವು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.

ಮಹಿಳೆಯರಿಗೆ ಗೌರವ ನೀಡುವ ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ ಈ ಕಾರ್ಯಕ್ರಮ ಎಂದು ಅವರು ಹೇಳಿದರು. ಮುಂದಿನ ವರ್ಷದಿಂದ ಮುತ್ತೈದೆಯರಿಗೆ ಉಡಿತುಂಬುವ ಸೇವೆಗೆ 1000 ಸೀರೆಗಳನ್ನು ನೀಡುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಮಠದ ಉತ್ತರಾಧಿಕಾರಿ ಚೇತನ್ ಮರಿದೇವರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.