ಅರಸೀಕೆರೆ : ಅರಸೀಕೆರೆಯಲ್ಲಿ ಬಂಜಾರ ಯುವಕರಿಂದ ಅದ್ದೂರಿ ಕ್ರೀಡಾಕೂಟ: ಶಾಸಕ ಶಿವಲಿಂಗೇಗೌಡರಿಂದ ‘ಬಂಜಾರ ಕಪ್’ಗೆ ಚಾಲನೆ

ಅರಸೀಕೆರೆ : ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ಬಂಜಾರ ಸಮುದಾಯದ ಯುವಕರ ವತಿಯಿಂದ ಭಾನುವಾರ ಅದ್ದೂರಿಯಾಗಿ ಸಂತ ಸೇವಾಲಾಲ ಮಹಾರಾಜರ ಜನ್ಮದಿನೋತ್ಸವವನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರು ಹಾಗೂ ಅರಸೀಕೆರೆ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆ.ಎಂ. ಶಿವಲಿಂಗೇಗೌಡರ 68ನೇ ವರ್ಷದ ಹುಟ್ಟುಹಬ್ಬ ಹಾಗೂ ಅರಸೀಕೆರೆ ನಗರಸಭೆಯ ಮಾಜಿ ಅಧ್ಯಕ್ಷ ಎಂ. ಸಮೀವುಲ್ಲಾ ಅವರ ಹುಟ್ಟುಹಬ್ಬದ ಪ್ರಯುಕ್ತ “ಸೇವಾ ಶಿವಲಿಂಗೇಗೌಡ ಬಂಜಾರ ಕಪ್” ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.

ವಿವಿಧ ಕ್ರೀಡಾ ಸ್ಪರ್ಧೆಗಳೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡರು ಭಾಗವಹಿಸಿ ಕಪ್‌ ಟೂರ್ನಿಯನ್ನು ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.

ಸಮುದಾಯದ ಏಕತೆ, ಯುವಕರ ಸಬಲೀಕರಣ ಮತ್ತು ಕ್ರೀಡಾ ಚಟುವಟಿಕೆಗಳ ಉತ್ತೇಜನವೇ ಕಾರ್ಯಕ್ರಮದ ಉದ್ದೇಶವಾಗಿದ್ದು, ಕ್ರೀಡಾಂಗಣದಲ್ಲಿ ಉತ್ಸಾಹಭರಿತ ವಾತಾವರಣ ಕಂಡುಬಂತು.

ಈ ಸಂದರ್ಭದಲ್ಲಿ ಗೀಜಿಹಳ್ಳಿ ಧರ್ಮಶೇಖರ್, ಬಾಣವಾರ ಶ್ರೀನಿವಾಸ್, ಮಂಜುಳಾಬಾಯಿ, ಸುಲೋಚನಾಬಾಯಿ, ಕಾರ್ಯಕ್ರಮದ ಆಯೋಜಕರಾದ ಪೃಥ್ವಿ ನಾಯ್ಕ, ವಿದ್ಯಾರ್ಥಿ ಕಾಂಗ್ರೆಸ್ ಮುಖಂಡ ಪುಣ್ಯ, ಯುವ ವಕೀಲ ಪರಮೇಶ್ವರ್ ಸೇರಿದಂತೆ ಸಮಾಜದ ಮುಖಂಡರು, ಕ್ರೀಡಾಪಟುಗಳು ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.