ಹಾವೇರಿ (ರಾಣೆಬೆನ್ನೂರು): ಅಂಕಲ್ ಮಮ್ಮಿಗೆ ಫೋನ್ ಕೊಡಿ: ಮದುವೆಯಾದ ವಾರದಲ್ಲೇ ಬಯಲಾಯ್ತು ವಧು ರೇಖಾ ಆಂಟಿ ರಹಸ್ಯ!

ಹಾವೇರಿ (ರಾಣೆಬೆನ್ನೂರು): ಇಬ್ಬರು ಮಕ್ಕಳ ತಾಯಿಯಾಗಿದ್ದ ಮಹಿಳೆಯೊಬ್ಬಳು 2.5 ಲಕ್ಷ ರೂಪಾಯಿ ವಧುದಕ್ಷಿಣೆ ಪಡೆದು ಯುವಕನೊಂದಿಗೆ ಮದುವೆಯಾಗಿದ್ದು, ವಾರದೊಳಗೆ ವಂಚನೆ ಬಯಲಾಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತುಮ್ಕಿನಕಟ್ಟಿ ಗ್ರಾಮದಲ್ಲಿ ನಡೆದಿದೆ.

ಹಣದಾಸೆಗಾಗಿ ಮದುವೆ?

ತುಮ್ಕಿನಕಟ್ಟಿ ಗ್ರಾಮದ ರವಿಚಂದ್ರ ಎಂಬ ಯುವಕನೊಂದಿಗೆ ಕಳೆದ ವಾರ ರೇಖಾ ಎಂಬ ಮಹಿಳೆಯ ಮದುವೆ ನಡೆದಿದೆ. ತುಮಕೂರಿನ ಪಾವಗಡ ಮೂಲದ ನಿವಾಸಿಯಾಗಿರುವ ರೇಖಾ, ಮದುವೆಯ ವೇಳೆ ಯುವಕನಿಂದ 2.5 ಲಕ್ಷ ರೂಪಾಯಿ ವಧುದಕ್ಷಿಣೆ ಪಡೆದಿದ್ದಳು ಎನ್ನಲಾಗಿದೆ. ಹಿರೇಕೇರೂರು ದುರ್ಗಾ ದೇವಿ ದೇವಸ್ಥಾನದಲ್ಲಿ ಈ ಮದುವೆ ನೆರವೇರಿತ್ತು.

ಒಂದೇ ವಾರದಲ್ಲಿ ಬಯಲಾದ ಸತ್ಯ

ಮದುವೆಯಾದ ಕೆಲವೇ ದಿನಗಳಲ್ಲಿ ರೇಖಾಳಿಗೆ ಬಂದ ಫೋನ್ ಕಾಲ್ ಮೂಲಕ ಆಕೆಯ ಭೂತಕಾಲ ಬಹಿರಂಗವಾಗಿದೆ. ಆಕೆಯ ಮಕ್ಕಳೇ ಕರೆ ಮಾಡಿದ ವೇಳೆ, ಫೋನ್ ಅನ್ನು ರವಿಚಂದ್ರ ಪೋಷಕರು ಸ್ವೀಕರಿಸಿದ್ದರು. “ನಾವು ರೇಖಾ ಮಕ್ಕಳು” ಎಂಬ ಮಾತು ಕೇಳುತ್ತಿದ್ದಂತೆಯೇ ಕುಟುಂಬಸ್ಥರಿಗೆ ಆಘಾತವಾಗಿದೆ. ರೇಖಾಳಿಗೆ ಇಬ್ಬರು ಮಕ್ಕಳು ಇರುವ ಸಂಗತಿ ಮದುವೆಗೂ ಮೊದಲು ತಿಳಿಸಿರಲಿಲ್ಲ ಎನ್ನಲಾಗಿದೆ.

ಪರಾರಿಯಾಗಲು ಯತ್ನ, ಬಂಧನ

ವಿಷಯ ಬಯಲಾಗುತ್ತಿದ್ದಂತೆ ರೇಖಾ ಗ್ರಾಮದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ಆದರೆ ಗ್ರಾಮಸ್ಥರು ಹಾಗೂ ರವಿಚಂದ್ರ ಕುಟುಂಬದವರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಘಟನೆ ಗ್ರಾಮದಲ್ಲಿ ಚರ್ಚೆಗೆ ಕಾರಣವಾಗಿದ್ದು, ಮದುವೆ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂಬ ಮಾತು ಕೇಳಿಬರುತ್ತಿದೆ.