video :ಹಾಸನ: ಹಾಸನದಲ್ಲಿ ಶಾಲಾ ಬಾಲಕಿಯನ್ನು ಹಿಂಬಾಲಿಸಿದ್ದ ಅಪರಿಚಿತ, ಸಿಸಿಟಿವಿಯಲ್ಲಿ ಸೆರೆಯಾದ ಆತಂಕಕಾರಿ ದೃಶ್ಯ

ಹಾಸನ: ನಗರದಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಹಿಂಬಾಲಿಸಿದ್ದ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಘಟನೆ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ 80 ಅಡಿ ರಸ್ತೆಯಲ್ಲಿ, ಕಳೆದ ಶನಿವಾರ ಮಧ್ಯಾಹ್ನ 12.52ರ ಸುಮಾರಿಗೆ ನಡೆದಿದೆ.

ಶಾಲೆ ಬೇಗ ಬಿಟ್ಟಿದ್ದ ಹಿನ್ನೆಲೆಯಲ್ಲಿ ಶಿಕ್ಷಕರು ಬಾಲಕಿಯನ್ನು ಶಾಲಾ ಬಸ್‌ನಲ್ಲೇ ಮನೆ ಸಮೀಪ ಇಳಿಸಿದ್ದರು. ಮನೆ ಕಡೆ ನಡೆದುಕೊಂಡು ಬರುತ್ತಿದ್ದ ಬಾಲಕಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಹಿಂಬಾಲಿಸಿಕೊಂಡು ಬಂದಿದ್ದಾನೆ.

ಅಪಾಯವನ್ನು ಅರಿತ ಬಾಲಕಿ, ಮನೆ ಬಳಿ ಬಂದ ವ್ಯಕ್ತಿಗೆ “ಇಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ” ಎಂದು ಧೈರ್ಯವಾಗಿ ಹೇಳಿದ್ದಾಳೆ. ಇದರಿಂದ ಗಾಬರಿಗೊಂಡ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ನಂತರ ಮನೆಗೆ ಬಂದ ತಾಯಿ ಹಾಗೂ ಅಜ್ಜಿ ಬಳಿ ಬಾಲಕಿ ನಡೆದ ಘಟನೆ ವಿವರಿಸಿದ್ದಾಳೆ.

ಘಟನೆ ಬಳಿಕ ಪೋಷಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಪರಿಚಿತ ವ್ಯಕ್ತಿ ಬಾಲಕಿಯನ್ನು ಹಿಂಬಾಲಿಸಿದ್ದ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿರುವುದು ಕಂಡುಬಂದಿದೆ. ಜರ್ಕಿನ್ ಹಾಗೂ ಟೋಪಿ ಧರಿಸಿದ್ದ ವ್ಯಕ್ತಿ, ಮನೆ ಗೇಟ್‌ವರೆಗೂ ಬಂದು ಒಳಗೆ ಇಣುಕಿ ನೋಡಿದ್ದು, ಕೆಲ ನಿಮಿಷಗಳ ಕಾಲ ಗೇಟ್ ಮುಂದೆ ಹೊಂಚು ಹಾಕಿ ನಿಂತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಅಪರಿಚಿತ ಹಿಂಬಾಲಿಸಿದ್ದರಿಂದ ಭೀತಿಗೊಂಡ ಬಾಲಕಿ, ಮನೆ ಕಾಂಪೌಂಡ್ ಒಳಗೆ ಓಡಿ ಹೋಗಿ ಗೇಟ್ ಲಾಕ್ ಮಾಡಿಕೊಂಡು “ಬಾಗಿಲು ತೆಗೆಯಮ್ಮ” ಎಂದು ಕಿರುಚಾಡಿದ್ದಾಳೆ. ಬಳಿಕ ಆತ ನಿಧಾನವಾಗಿ ಅಲ್ಲಿಂದ ತೆರಳಿದ್ದಾನೆ. ಘಟನೆಯ ನಂತರ ಬಾಲಕಿ ತೀವ್ರ ಆತಂಕಕ್ಕೆ ಒಳಗಾಗಿದ್ದು, ಮೂರು ದಿನಗಳ ಕಾಲ ಜ್ವರದಿಂದ ಬಳಲಿದ್ದಾಳೆ. ಸದ್ಯ ಗುಣಮುಖಳಾಗಿ ಶಾಲೆಗೆ ತೆರಳಿದ್ದಾಳೆ ಎಂದು ತಿಳಿದುಬಂದಿದೆ.

ಈ ಕುರಿತು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೆನ್‌ಷನ್ ಮೊಹಲ್ಲಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಅಪರಿಚಿತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ನಗರದಲ್ಲಿ ನಡೆದ ಈ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದ್ದು, ಶಾಲಾ ಮಕ್ಕಳ ಸುರಕ್ಷತೆಗಾಗಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.