ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಜನವರಿ 13 ರ ಮಂಗಳವಾರದಂದು ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಹಿರಿಯ ಉಪನೋಂದಣಾಧಿಕಾರಿ ಕೆ.ಆರ್.ನಾಗರಾಜು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವತಿಯಿಂದ ಈ ತರಬೇತಿ ನಡೆಯಲಿದ್ದು, ಇ-ಸ್ಟ್ಯಾಂಪ್ ಬಳಸುವ ವಿಧಾನ ಮತ್ತು ಅದರ ತಾಂತ್ರಿಕ ಪ್ರಕ್ರಿಯೆಗಳ ಬಗ್ಗೆ ತಜ್ಞರು ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕು ತಹಸೀಲ್ದಾರ್ರವರ ಸಭಾಂಗಣದಲ್ಲಿ ಮಧ್ಯಾಹ್ನ 12.30 ರಿಂದ 1.30 ರವರೆಗೆ ಈ ಕಾರ್ಯಾಗಾರ ಜರುಗಲಿದೆ ಎಂದರು.
ಈ ವಿಶೇಷ ತರಬೇತಿ ಕಾರ್ಯಾಗಾರಕ್ಕೆ ತಾಲ್ಲೂಕು ದಸ್ತಾವೇಜು ಬರಹಗಾರರ ಸಂಘ, ವಕೀಲರ ಸಂಘ (ಬಾರ್ ಅಸೋಸಿಯೇಷನ್), ವಿವಿಧ ಸಹಕಾರ ಸಂಘಗಳು ಮತ್ತು ಬ್ಯಾಂಕುಗಳಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಇದರೊಂದಿಗೆ ಜಿ.ಸೇವಾ ಕೇಂದ್ರ ಹಾಗೂ ಕರ್ನಾಟಕ-ಒನ್ ಕೇಂದ್ರಗಳ ವ್ಯವಸ್ಥಾಪಕರಿಗೂ ಭಾಗವಹಿಸಲು ಸೂಚಿಸಲಾಗಿದೆ.
ತರಬೇತಿಯಲ್ಲಿ ಸಾರ್ವಜನಿಕರು ತಮ್ಮ ಮುಂದಿನ ದಿನಗಳ ಆಸ್ತಿ ವ್ಯವಹಾರ ಹಾಗೂ ಇತರ ಕಾನೂನಾತ್ಮಕ ಒಪ್ಪಂದಗಳಿಗೆ ಡಿಜಿಟಲ್ ಇ-ಸ್ಟ್ಯಾಂಪ್ ಬಳಸುವ ಕುರಿತು ಹೆಚ್ಚಿನ ಜ್ಞಾನ ಪಡೆಯಲು ಈ ತರಬೇತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಚನ್ನರಾಯಪಟ್ಟಣ ಹಿರಿಯ ಉಪನೋಂದಣಾಧಿಕಾರಿ ಕೆ.ಆರ್.ನಾಗರಾಜು. ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.










