ಯಲ್ಲಾಪುರ: ಮಹಿಳೆ ಹ*ತ್ಯೆ ಪ್ರಕರಣದಲ್ಲಿ ಶಾಕಿಂಗ್ ಟ್ವಿಸ್ಟ್: ಕೊ*ಲೆ ಆರೋಪಿ ನೇಣಿಗೆ ಶರಣು

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮದುವೆಗೆ ಒಪ್ಪದ ವಿಚ್ಛೇದಿತ ಮಹಿಳೆಯ ಬರ್ಬರ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂದಿದೆ. ರಂಜಿತಾಳನ್ನು ಕೊಲೆಗೈದು ಅರಣ್ಯದಲ್ಲಿ ಪರಾರಿಯಾಗಿದ್ದ ಆರೋಪಿ ರಫೀಕ್ (30) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ರಫೀಕ್ ಮೃತದೇಹ ಯಲ್ಲಾಪುರದ ಕಾಳಮ್ಮನಗರ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.

ನಿನ್ನೆ ನಡೆದ ಕೊಲೆ ಬಳಿಕ ಆರೋಪಿಗಾಗಿ ಶ್ವಾನದಳದ ಮೂಲಕ ಇಂದು ಹುಡುಕಾಟ ನಡೆಸಲಾಗುತ್ತಿತ್ತು. ಈ ವೇಳೆ ಅರಣ್ಯ ಪ್ರದೇಶದಲ್ಲಿ ರಫೀಕ್ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ರಂಜಿತಾ ಸುಮಾರು ಹತ್ತು ವರ್ಷಗಳ ಹಿಂದೆ ಗಂಡನಿಂದ ವಿಚ್ಛೇದನ ಪಡೆದಿದ್ದಳು. ಒಂದು ಮಗು ಹೊಂದಿದ್ದ ಆಕೆ, ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದು, ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ನಡುವೆ ರಫೀಕ್ ಆಕೆಯನ್ನು ಪ್ರೀತಿಸುತ್ತಿದ್ದು, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನೆಂದು ತಿಳಿದುಬಂದಿದೆ. ಆದರೆ ರಂಜಿತಾ ಮದುವೆಗೆ ಸ್ಪಷ್ಟವಾಗಿ ನಿರಾಕರಿಸಿದ್ದಳು.

ಘಟನೆ ನಡೆದ ದಿನ ರಂಜಿತಾ ಶಾಲೆಯಿಂದ ಮನೆಗೆ ಮರಳುತ್ತಿದ್ದ ವೇಳೆ ರಸ್ತೆ ಮಧ್ಯೆ ಆಕೆಯನ್ನು ಅಡ್ಡಗಟ್ಟಿ ಮದುವೆ ಪ್ರಸ್ತಾಪ ಮಾಡಿದ್ದ ರಫೀಕ್, ಮತ್ತೆ ನಿರಾಕರಣೆ ವ್ಯಕ್ತವಾದ ಕಾರಣ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಆರೋಪಿ ರಫೀಕ್ ಮತ್ತು ರಂಜಿತಾಳ ಅಣ್ಣ ಪರಸ್ಪರ ಸ್ನೇಹಿತರಾಗಿದ್ದು, ಘಟನೆಯ ಮುನ್ನದ ರಾತ್ರಿ ಇಬ್ಬರೂ ಪಾರ್ಟಿ ಮಾಡಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಇನ್ನು, ಹಿಂದೂ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ ಇಂದು ಯಲ್ಲಾಪುರ ಬಂದ್‌ಗೆ ವಿಎಚ್‌ಪಿ ಕರೆ ನೀಡಿತ್ತು. ಅಂಗಡಿ ಮುಂಗಟ್ಟು ಮುಚ್ಚಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿತ್ತು. ಆರೋಪಿಯನ್ನು ಬಂಧಿಸುವವರೆಗೂ ರಂಜಿತಾಳ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು. ಆದರೆ ಈ ಮಧ್ಯೆ ಆರೋಪಿ ರಫೀಕ್ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.