ಹಾಸನ: ಮರ್ಯಾದೆಗೆಡು ಹತ್ಯೆ ಹಾಗೂ ಮಹಿಳೆ–ಮಕ್ಕಳ ಮೇಲಿನ ಅಪರಾಧಗಳ ಅಂತ್ಯಕ್ಕೆ ಆಗ್ರಹಿಸಿ ಎಐಡಿಎಸ್‌ಒ ಪ್ರತಿಭಟನೆ

The programs were held at Maharaja Park, Ananda Bharathi High School, Government Girls' High School, Government Boys' High School, Government Higher Primary School, and school premises in Hangarahalli and other parts

ಹಾಸನ: ಮಹಾನ್‌ ಸಮಾಜ ಸುಧಾರಕಿ ಹಾಗೂ ನವೋದಯ ವ್ಯಕ್ತಿತ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ ಮರ್ಯಾದೆಗೇಡು ಹತ್ಯೆಗಳು ಹಾಗೂ ಮಹಿಳೆಯರು ಮಕ್ಕಳ ಮೇಲಿನ ಅಪರಾಧಗಳು ಸಂಪೂರ್ಣವಾಗಿ ಅಂತ್ಯಗೊಳ್ಳಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ಜಿಲ್ಲಾ ಸಮಿತಿಯಿಂದ ಶನಿವಾರ ನಗರದ ವಿವಿಧ ಶಾಲಾ ಕಾಲೇಜು ಬಳಿ ಪ್ರತಿರೋಧ ದಿನ ಆಚರಿಸಲಾಯಿತು.

ನಗರದ ಮಹಾರಾಜ ಪಾರ್ಕ್‌, ಆನಂದ ಭಾರತಿ ಪ್ರೌಢಶಾಲೆ, ಪ್ರಧಾನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಸರ್ಕಾರಿ ಬಾಲಕರ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಂಗರಹಳ್ಳಿ ಹಾಗೂ ಇತರ ಭಾಗಗಳಲ್ಲಿ ಶಾಲಾ ಆವರಣಗಳಲ್ಲಿ ಕಾರ್ಯಕ್ರಮ ನಡೆದವು.

ಈ ವೇಳೆ ಕೆಪಿಎಸ್‌ ಮ್ಯಾಗ್ನೆಟ್‌ ಯೋಜನೆ ಹೆಸರಿನಲ್ಲಿ ರಾಜ್ಯದ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಚೈತ್ರ ಹಾಗೂ ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಮಾತನಾಡಿ, ಸಮಾಜದಲ್ಲಿ ಮರ್ಯಾದೆಗೇಡು ಹತ್ಯೆಗಳಂತಹ ಅಮಾನುಷ ಘಟನೆ ಹೆಚ್ಚುತ್ತಿರುವುದು ಗಂಭೀರ ಚಿಂತೆನೆಯ ವಿಷಯವಾಗಿದೆ ಎಂದರು.

ಇತ್ತೀಚೆಗೆ ಹುಬ್ಬಳ್ಳಿ ಹಾಗೂ ಬೆಂಗಳೂರು ದೇವನಹಳ್ಳಿಯಲ್ಲಿ ನಡೆದ ಘಟನೆಗಳು ಇದಕ್ಕೆ ಸ್ಪಷ್ಟ ಉದಾಹರಣೆಗಳಾಗಿವೆ ಎಂದು ಉಲ್ಲೇಖಿಸಿದರು.

ಜಾತಿ ಮತ್ತು ಧರ್ಮಕ್ಕಿಂತ ಮಾನವೀಯತೆಯೇ ಮಿಗಿಲು ಎಂಬ ಮೌಲ್ಯ ಸಮಾಜದಲ್ಲಿ ಗಟ್ಟಿಯಾಗಿ ನೆಲೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಾವಿತ್ರಿಬಾಯಿ ಫುಲೆ ಅವರನ್ನು ಕೇವಲ ಶಾಂತ ಸ್ವಭಾವದ ಶಿಕ್ಷಕಿಯೆಂದು ಮಾತ್ರ ಸ್ಮರಿಸುವುದು ಅಪೂರ್ಣ ಚಿತ್ರಣವಾಗುತ್ತದೆ. ಸಾವಿರಾರು ವರ್ಷಗಳ ಶೋಷಣೆ
ವಿರುದ್ಧ ಶಿಕ್ಷಣವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಹೋರಾಟಗಾರ್ತಿ ಅವರು ಎಂದು ಬಣ್ಣಿಸಿದರು.

ಗೋ ಗೆಟ್‌ ಎಜುಕೇಶನ್‌ ಕವಿತೆಯಲ್ಲಿ ಶಿಕ್ಷಣ ಪಡೆದು ಜಾತಿಯ ಸಂಕೋಲೆಗಳನ್ನು ಮುರಿಯುವಂತೆ ಅವರು ನೀಡಿದ ಕರೆ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ದಿನೇ ದಿನೆ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಯ ಪ್ರಕಾರ 2023 ರಿಂದ 2025ರ ಜುಲೈವರೆಗೆ ಕರ್ನಾಟಕದಲ್ಲಿ 16,273 ಲೈಂಗಿಕ ದೌರ್ಜನ್ಯ, 5,456 ವರದಕ್ಷಿಣೆ ಪ್ರಕರಣ, 10,510 ಗೃಹಹಿಂಸೆ ಹಾಗೂ 417 ಬಾಲ್ಯವಿವಾಹ ಪ್ರಕರಣ ಸೇರಿ ಒಟ್ಟು 43,052 ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು.

ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು ಎಂಬುದು ಸಾವಿತ್ರಿಬಾಯಿ ಫುಲೆ ಅವರ ಮೂಲ ಆಶಯವಾಗಿತ್ತು. ಅದಕ್ಕೆ ವಿರುದ್ಧವಾಗಿ ಇಂದಿನ ಸರ್ಕಾರ ಕೆಪಿಎಸ್‌ ಮ್ಯಾಗ್ನೆಟ್‌ ಯೋಜನೆಯಡಿ ಸಾವಿರಾರು ಸರ್ಕಾರಿ ಶಾಲೆ ಮುಚ್ಚಲು ಮುಂದಾಗಿರುವುದು ಖಂಡನೀಯ ಎಂದರು.

ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್‌ ಬೆಟ್ಟದಕೊಪ್ಪ, ಜಿಲ್ಲಾ ಉಪಾಧ್ಯಕ್ಷ ಅಭಿಷೇಕ್‌, ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಸೇರಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

The programs were held at Maharaja Park, Ananda Bharathi High School, Government Girls’ High School, Government Boys’ High School, Government Higher Primary School, and school premises in Hangarahalli and other parts