ಹಾಸನ: ಯೋಧರ ತ್ಯಾಗ, ಧೈರ್ಯ, ಶಿಸ್ತು ಬದುಕಿಗೆ ಪ್ರೇರಣೆ – ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್

Local MLA H.P. Swaroop Prakash opined that the sacrifice, courage, and discipline of the soldiers are an inspiration to everyone's lives.

ಹಾಸನ: ಯೋಧರ ತ್ಯಾಗ, ಧೈರ್ಯ, ಶಿಸ್ತು ಎಲ್ಲರ ಬದುಕಿಗೂ ಪ್ರೇರಣೆ ಎಂದು ಸ್ಥಳೀಯ ಶಾಸಕ ಹೆಚ್‌.ಪಿ. ಸ್ವರೂಪ್‌ ಪ್ರಕಾಶ್‌ ಅಭಿಪ್ರಾಯಪಟ್ಟರು.

ನಗರದ ಬೂವನಹಳ್ಳಿ ಸಮೀಪದ ವರಲಿಕೊಪ್ಪಲು ಗ್ರಾಮದಲ್ಲಿ ನಿವೃತ್ತ ಯೋಧ ಸಿ.ರವಿ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯೋಧರ ಜೀವನ ಸುಲಭವಾಗಿರುವುದಿಲ್ಲ. ದೇಶದ ನಾಗರೀಕರು ಸುರಕ್ಷಿತವಾಗಿರಲೆಂದು ಅವನು ಗಡಿಯಲ್ಲಿ ನಿದ್ರೆ ಇಲ್ಲದೆ ಕಾವಲು ನಿಲ್ಲುತ್ತಾರೆ.

ನಮ್ಮ ಹಬ್ಬಗಳು ಸಂಭ್ರಮವಾಗಿರಲೆಂದು ಅವನು ತನ್ನ ಕುಟುಂಬದಿಂದ ದೂರವಿರುತ್ತಾನೆ. ಇಂತಹ ತ್ಯಾಗ, ಧೈರ್ಯ, ಶಿಸ್ತಿನ ಬದುಕು ಪ್ರತಿಯೊಬ್ಬ ನಾಗರಿಕನಿಗೂ ಪ್ರೇರಣೆ ಎಂದು ನುಡಿದರು.

ಅಭಿನಂದನಾ ನುಡಿಗಳನ್ನಾಡಿದ ಬೂವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್‌. ಬೊಮ್ಮೇಗೌಡ , ಯೋಧರಿಗೆ ನಮ್ಮ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ. ಅವರ ತ್ಯಾಗ, ಧೈರ್ಯ, ಶೌರ್ಯ ಗುರುತಿಸಿ ಪ್ರತಿಯೊಬ್ಬರೂ ಗೌರವಿಸಬೇಕಿದೆ ಎಂದರು.

ಯೋಧನ ಧೈರ್ಯಕ್ಕೆ ಮೂಲವೇ ಆತನ ಕುಟುಂಬ, ಅವನ ಶೌರ್ಯಕ್ಕೆ ಬೆಂಬಲವೇ ಇವರ ತ್ಯಾಗ. ಯೋಧರ ಕುಟುಂಬದ ಸಹಕಾರ, ತ್ಯಾಗ ಮನೋಭಾವದಿಂದಾಗಿ ಇಂದು ಸಮಾಜದಲ್ಲಿ ಎಲ್ಲರೂ ಸುರಕ್ಷಿತವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.

ನಿವೃತ್ತ ಯೋಧರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಗೋವಿಂದೇಗೌಡ ಮಾತನಾಡಿ, ಯೋಧರು ಸೇವೆಯಿಂದ ನಿವೃತ್ತಿ ಹೊಂದಿದಾಗ ಅವರನ್ನು ಸಮಾಜ ಗೌರವಿಸಿದರೆ ಅವರ ಸೇವೆಗೆ ಸಾರ್ಥಕತೆ ದೊರೆತಂತಾಗುತ್ತದೆ. ಯೋಧರ ಸೇವೆಗೆ ತಕ್ಕುದಾದ ಸಲವತ್ತುಗಳು ಸರ್ಕಾರದಿಂದ ಅವರಿಗೆ ದೊರೆಯಬೇಕು ಆಗ ಮಾತ್ರ ನಿಜವಾದ ಗೌರವ ಸಿಕ್ಕಂತಾಗುತ್ತದೆ ಎಂದರು.

ಬೂವನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತುಳಸಿರಾಂ ಮಾತನಾಡಿ, ಭಾರತ ದೇಶ ಇಷ್ಟು ಸುಭದ್ರವಾಗಿರಲು ಯೊಧರ ತ್ಯಾಗ,ಬಲಿದಾನವೇ ಕಾರಣ. ಅವರು ನಮ್ಮೆಲ್ಲರಿಗೂ ಆದರ್ಶಪ್ರಾಯ ಎಂದರು.

ಕಾರ್ಯಕ್ರಮಕ್ಕೂ ಮೊದಲು ನಗರದ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ನಿವೃತ್ತ ಯೋಧ ಸಿ.ರವಿ ಅವರನ್ನು ತೆರೆದ ಜೀಪಿನಲ್ಲಿ ಸ್ವಗ್ರಾಮದವರೆಗೂ ಮೆರವಣಿಗೆಯಲ್ಲಿ ಕರೆ ತರಲಾಯಿತು.

ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಎಸ್‌.ಎಸ್‌ ರಘುಗೌಡ, ನಗರ ಪಾಲಿಕೆ ಮಾಜಿ ಸದಸ್ಯ ವಾಸುದೇವ್‌, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಯರಾಂ, ದಿನೇಶ್‌, ಪಿಎಸಿಸಿಎಸ್‌ ಮಾಜಿ ಅದ್ಯಕ್ಷ ಮಲ್ಲೇಶ್‌, ಮುಖಂಡ ಪದ್ಮರಾಜು ಇತರರು ಹಾಜರಿದ್ದರು. ಕುಮಾರಿ ರಕ್ಷಾ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು.

Local MLA H.P. Swaroop Prakash opined that the sacrifice, courage, and discipline of the soldiers are an inspiration to everyone’s lives.