ಹಾಸನ: ಕನ್ನಡ ನಿತ್ಯೋತ್ಸವ, ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಲ್ಲ- ನಾಗೇಶ್ ಕೌಂಡಿನ್ಯ

Noted novelist Nagesh Kaundinya opined that Kannada is not a Rajyotsava, but a Nityotsava. He was speaking while inaugurating the 70th Kannada Rajyotsava and 70 book release ceremony organized by Sapna Bookhouse in the city.

ಹಾಸನ: ಕನ್ನಡ ಅನ್ನೋದು ರಾಜ್ಯೋತ್ಸವವಲ್ಲ, ಅದು ನಿತ್ಯೋತ್ಸವ ಎಂದು ನಾಡಿನ ಹೆಸರಾಂತ ಕಾದಂಬರಿಕಾರ ನಾಗೇಶ್ ಕೌಂಡಿನ್ಯ ಅಭಿಪ್ರಾಯಪಟ್ಟರು. ನಗರದ ಸಪ್ನ ಬುಕ್‌ಹೌಸ್ ಏರ್ಪಡಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಹಾಗೂ 70 ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜ್ಯೋತ್ಸವ ಆಚರಣೆ ನವೆಂಬರ್‌ಗಷ್ಟೇ ಸೀಮಿತವಾಗಬಾರದು, ವರ್ಷ ಪೂರ್ತಿ ನಿತ್ಯ ನಿರಂತರವಾಗಿರಬೇಕು. ನಾವು ಪ್ರತಿ ಕ್ಷಣ ಗಾಳಿಯನ್ನು ಉಸಿರಾಡುವಂತೆ, ನಿತ್ಯ ಆಹಾರ ಸೇವಿಸುವಂತೆ, ಕನ್ನಡ ಪುಸ್ತಕವನ್ನು ಓದುವ ಮೂಲಕ ಕನ್ನಡ ಭಾಷೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂಬುದೆ ನನ್ನ ಆಸೆ ಎಂದರು.

ದೊಡ್ಡ ಆಲದ ಮರದಲ್ಲಿ ಎಷ್ಟು ಕೊಂಬೆಗಳಿವೆ ಅಂತ ನಾವು ಊಹೆ ಮಾಡಲಾಗಲ್ಲ, ಹಾಗೆಯೇ ಸಪ್ನ ಬುಕ್ ಹೌಸ್ ಭಾರತದ ಅತ್ಯಂತ ದೊಡ್ಡ ಪುಸ್ತಕ ಮಾರಾಟ ಮಳಿಗೆಯಾಗಿದ್ದು, ಪುಸ್ತಕ ಉದ್ಯಮಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದೆ ಎಂದರು.

ಸಪ್ನ ಬುಕ್‌ಹೌಸ್ ಎಲ್ಲಾ ಭಾಷೆಯ ಬರಹಗಾರರಿಗೆ ಉತ್ತೇಜನ ಕೊಡುವುದಲ್ಲದೆ, ಹೊಸ ಪುಸ್ತಕಗಳನ್ನೂ ಹೊರ ತರುತ್ತಿದೆ. ನಾನೂ ಹಲವಾರು ಬರಹಗಾರರಿಗೆ ಮುನ್ನುಡಿ ಬರೆದು ಕೊಟ್ಟಿದ್ದೇನೆ. ಆದರೆ ಸಪ್ನ ಬುಕ್‌ಹೌಸ್ ಪುಸ್ತಕ ಲೋಕಾರ್ಪಣೆ ಮಾಡುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ. ಮದುವೆ, ಗೃಹಪ್ರವೇಶ, ನಾಮಕರಣ ಹೀಗೆ ಎಲ್ಲಿಗೆ ಹೋದರೂ ನಾನು ಪುಸ್ತಕ ನೀಡುವೆ ಎಂದ ಅವರು, ಕಡೆ ಪಕ್ಷ 5 ಪುಟ ಓದಿ ಎಂದು ತಿಳಿಸಿ ಆಶೀರ್ವಾದ ತಿಳಿಸಿ ಬರುವೆ ಎಂದರು.

ಪುಸ್ತಕ ನೀಡಿದರೆ ಪುಸ್ತಕ ಓದುವ ಅಭಿರುಚಿ ಬೆಳೆಯುವುದರ ಜೊತೆಗೆ, ಈ ಸಂಸ್ಥೆ ಬೆಳೆದ ಹಾಗೆ ಪುಸ್ತಕ ಉದ್ಯಮವೂ ಬೆಳೆಯುತ್ತದೆ. ಹೊಸ ಲೇಖಕರ ಕೃತಿಗಳಿಗೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಅವರ ಸಂಸ್ಥೆಯಿಂದ ಇನ್ನೂ ಹೆಚ್ಚು ಲೇಖಕರ ಕೃತಿಗಳು ಪ್ರಕಟಿಸಿದರೆ ಲೇಖಕರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು. ಕನ್ನಡ ಪುಸ್ತಕೋದ್ಯಮ ಅಭಿವೃದ್ಧಿಯಾಗಲಿ, ಎಲ್ಲರೂ ಕನ್ನಡ ಓದುವ ಮೂಲಕ ನಮ್ಮ ಕನ್ನಡ ಭಾಷೆ, ಪುಸ್ತಕದ ಮಳಿಗೆ ಉಳಿಸಿರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ಮಾತನಾಡಿ, 70ನೇ ಕನ್ನಡ ರಾಜ್ಯೋತ್ಸವದಂದು 70 ಕೃತಿ ಲೋಕಾರ್ಪಣೆ ಮಾಡುತ್ತಿರುವ ಸಪ್ನ ಬುಕ್ ಹೌಸ್, ರಾಜ್ಯದ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಏಕಕಾಲದಲ್ಲಿ ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದರು.

ಸಾಹಿತಿಗಳ ಕೃತಿಗಳನ್ನು ವಿಭಿನ್ನವಾಗಿ ಬಿಡುಗಡೆ ಮಾಡಿದಾಗ ಅವರು ಮುಂದಿನ ದಿನಗಳಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೇರಣೆಯಾಗಿ ಹೆಚ್ಚಿನ ಶಕ್ತಿ ದೊರಕಿದಂತಾಗುತ್ತದೆ. ಸಮಾರಂಭಗಳಲ್ಲಿ ಕೌಂಡಿನ್ಯ ಅವರ ಅನುಸರಣೆಯನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳೋಣ. ಉಡುಗೊರೆಯಾಗಿ ಕೊಟ್ಟಂತಹ ಹಣ ಇಟ್ಟುಕೊಳ್ಳಲಾಗಲ್ಲ, ಆದರೆ ಪುಸ್ತಕ ನೀಡಿದಾಗ ಹಲವಾರು ಕೈ ಬದಲಾವಣೆ ಆಗಿ ಪುಸ್ತಕದ ವಿಚಾರಗಳು ಅವರ ತಲೆಗೆ ಹೋದಾಗ ಬದುಕಿನಲ್ಲಿ ಬದಲಾವಣೆ ಅವಕಾಶ ಇರುತ್ತವೆ. ಹಾಗಾಗಿ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಪ್ರವೃತ್ತಿಯನ್ನು ನಾವು ಬೆಳೆಸಿ ಕೊಂಡು ಕೌಂಡಿನ್ಯ ಅವರ ಮಾರ್ಗದರ್ಶನ ಅನುಸರಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿಗಳಾದ ಎ.ಎಲ್. ಚನ್ನೇಗೌಡ, ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಶೈಲಜಾ ಹಾಸನ್, ಕೌಶಿಕ್ ಕೂಡುರಸ್ತೆ ಮಾತನಾಡಿದರು. ಸಪ್ನ ಬುಕ್ ಹೌಸ್‌ನ ಶಾಖಾ ವ್ಯವಸ್ಥಾಪಕಿ ಶಾಂತಲಾ ಬಿ.ಎಸ್. ಸ್ವಾಗತಿಸಿದರು. ಶ್ರೀರಕ್ಷಾ ನಿರೂಪಿಸಿದರು.

Noted novelist Nagesh Kaundinya opined that Kannada is not a Rajyotsava, but a Nityotsava. He was speaking while inaugurating the 70th Kannada Rajyotsava and 70 book release ceremony organized by Sapna Bookhouse in the city.