ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ: ಹಾಸನದ ಇಬ್ಬರು ಗಣ್ಯರಿಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ

The 3-day fifth state-level scientific conference was organized in Yadgir from December 28 to 30, and two dignitaries from the district received prestigious state-level awards, said Ravi Nakalagud, district president of the council.

ಹಾಸನ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ವತಿಯಿಂದ ಡಿ.28 ರಿಂದ 30 ರವರೆಗೆ ಯಾದಗಿರಿಯಲ್ಲಿ 3 ದಿನಗಳ ಐದನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಆಯೋಜಿಸಿದ್ದು, ಜಿಲ್ಲೆಯ ಇಬ್ಬರು ಗಣ್ಯರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಲಭಿಸಿವೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ರವಿ ನಾಕಲಗೂಡು ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.28 ರಿಂದ ಮೂರು ದಿನನಡೆಯಲಿರುವ ಮಹತ್ವದ ಸಮ್ಮೇಳನಕ್ಕೆ ರಾಜ್ಯದ ನಾನಾ ಭಾಗಗಳಿಂದ 2 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಜಿಲ್ಲೆಯಿಂದಲೂ ಪರಿಷತ್ತಿನ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಲಿದ್ದಾರೆ ಎಂದರು.

ಸಮ್ಮೇಳನದಲ್ಲಿ ಜಿಲ್ಲೆಯ ಹಿರಿಯ ವಕೀಲ ಹಾಗೂ ರಂಗ ಕಲಾವಿದರಾದ ಕೆ.ವಿ.ಯೋಗೀಶ್ ಅವರಿಗೆ ವಿಜ್ಞಾನ ಚಿಂತನೆ ಹಾಗೂ ಸಮಾಜ ಸೇವೆಗೆ ನೀಡುವ ರಾಜ್ಯಮಟ್ಟದ ಪ್ರತಿಷ್ಠಿತ ಎಚ್.ಎನ್. ನರಸಿಂಹಯ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅದೇ ರೀತಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎನ್‌ಎಸ್‌ಎಸ್ ಅಧಿಕಾರಿ ನಿಚಿತಾ ಕುಮಾರಿ ಅವರಿಗೆ ಚೈತನ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಇತ್ತೀಚೆಗೆ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜು ಅವರ ಅಧ್ಯಕ್ಷತೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ಟೆಲಿಸ್ಕೋಪ್ ತಯಾರಿಕಾ ತರಬೇತಿಯಲ್ಲಿ ಜಿಲ್ಲೆಯ ಅನೇಕ ಮಕ್ಕಳು ಭಾಗವಹಿಸಿದ್ದರು.

ಈ ಕಾರ್ಯಕ್ರಮ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ಹಲವು ವಿಶ್ವ ದಾಖಲೆ ನಿರ್ಮಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಮುಂಬರುವ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 1 ಲಕ್ಷ ಮಕ್ಕಳನ್ನು ಒಗ್ಗೂಡಿಸಿ ಬೇಲೂರಿನ ಪುಷ್ಪಗಿರಿ ಮಠದಲ್ಲಿ ಬೃಹತ್ ವೈಜ್ಞಾನಿಕ ಹಾಗೂ ಮೌಲ್ಯಾಧಾರಿತ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಕೈಗೊಳ್ಳ ಲಾಗಿದೆ. ಈ ಮಹತ್ವದ ಕಾರ್ಯಕ್ರಮಕ್ಕೆ ರಾಷ್ಟçಪತಿಗಳನ್ನು ಆಹ್ವಾನಿಸಲಾಗಿದ್ದು, ಅವರ ಅನುಕೂಲಕ್ಕೆ ತಕ್ಕಂತೆ ದಿನಾಂಕ ನಿಗದಿಪಡಿಸಲಾಗುವುದು ಎಂದು ರವಿ ನಾಕಲಗೂಡು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಮೋಗಣ್ಣಗೌಡ ಹಾಗೂ ಮಾಜಿ ಅಧ್ಯಕ್ಷ ಜೆ.ಪಿ.ಶೇಖರ್ ಮಾತನಾಡಿ, ವೈಜ್ಞಾನಿಕ ಸಂಶೋಧನಾ ಪರಿಷತ್ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಜೊತೆಗೆ ಮೌಲ್ಯಾಧಾರಿತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದು, ಇಂತಹ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು.

ಮಕ್ಕಳು, ಸಾರ್ವಜನಿಕರಲ್ಲಿಯೂ ವಿಜ್ಞಾನದ ಅರಿವು ಹೆಚ್ಚಿಸುವುದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ಜಿ.ಆರ್. ಶ್ರೀನಿವಾಸ್, ನಂದಿನಿ, ಕುಮಾರ್, ನಾಯಕರಹಳ್ಳಿ ಮಂಜೇಗೌಡ, ಚೈತ್ರ ನಾಯಕಹಳ್ಳಿ, ರಾಣಿ ಇತರರಿದ್ದರು.

The 3-day fifth state-level scientific conference was organized in Yadgir from December 28 to 30, and two dignitaries from the district received prestigious state-level awards, said Ravi Nakalagud, district president of the council.