ಸಕಲೇಶಪುರ: ಐಷಾರಾಮಿ ಬಂಗಲೆಯಲ್ಲಿ ಕುಳಿತು ಟಿಕೆಟ್ ಹಂಚಿಕೆ ಮಾಡಿದರೆ ಪ್ರಯೋಜನವಿಲ್ಲ

KPCC member Salim Kollahalli said that priority should be given to those who are active in the constituency instead of distributing tickets sitting in a luxurious bungalow.

ಸಕಲೇಶಪುರ: ಐಷಾರಾಮಿ ಬಂಗಲೆಯಲ್ಲಿ ಕುಳಿತು ಟಿಕೆಟ್ ಹಂಚಿಕೆ ಮಾಡುವ ಬದಲು ಕ್ಷೇತ್ರದಲ್ಲಿ ಸಕ್ರಿಯರಾಗಿರುವವರಿಗೆ ಆದ್ಯತೆ ನೀಡಬೇಕು ಎಂದು ಕೆಪಿಸಿಸಿ ಸದಸ್ಯ ಸಲೀಂ ಕೊಲ್ಲಹಳ್ಳಿ ಹೇಳಿದರು.

ತಾಲೂಕಿನ ವಡೂರು ಗ್ರಾಮದ ಹೋಂ ಸ್ಟೇ ಯಲ್ಲಿ ನಡೆದ ಬೆಳಗೋಡು ಜಿಲ್ಲಾ ಪಂಚಾಯಿತಿ ಮಟ್ಟದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿ, ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದರೂ ಸೋತರೂ ಬೆಳಗೋಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿರುವುದಾಗಿ ಹೇಳಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಷ್ಟು ಬಲಿಷ್ಠವಾದ ಮತ್ತೊಂದು ಪಕ್ಷ ಇಲ್ಲ. ಹಲವು ನಾಯಕರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಬೆಳಗೋಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಿ, ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸುವ ಉದ್ದೇಶದಿಂದಲೇ ಈ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.

ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ಅರ್ಜುನ ಆನೆ ಸಾವಿನ ವಿಚಾರದಲ್ಲಿ ಹೋರಾಟಗಾರರ ವಿರುದ್ಧ ದೂರು ದಾಖಲಾಗಿರುವುದು ಶೋಚನೀಯ ಎಂದರು.

ಪಕ್ಷ ನನಗೆ ಕೆಪಿಸಿಸಿ ಸದಸ್ಯತ್ವವನ್ನು ಪಕ್ಷ ಕಟ್ಟುವ ಜವಾಬ್ದಾರಿಯೊಂದಿಗೆ ನೀಡಿದೆ. ಆ ನಿಟ್ಟಿನಲ್ಲಿ ತಳಮಟ್ಟದಿಂದ ಪಕ್ಷವನ್ನು ಬಲಪಡಿಸಲು ಇದು ಮೊದಲ ಸಭೆಯಾಗಿದೆ. ಮುಂದಿನ ದಿನಗಳಲ್ಲಿ ಬೆಳಗೋಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಇಂತಹ ಸಭೆಗಳನ್ನು ನಡೆಸಲಾಗುವುದು. ಕಾರ್ಯಕರ್ತರ ಅಭಿಪ್ರಾಯಗಳನ್ನು ಪಕ್ಷದ ಮುಖಂಡರಿಗೆ ತಲುಪಿಸಿ, ಯಾರು ನಾಯಕತ್ವ ವಹಿಸಬೇಕೆಂದು ಕಾರ್ಯಕರ್ತರು ತೀರ್ಮಾನಿಸುತ್ತಾರೋ ಅವರ ಹೆಸರನ್ನು ಶಿಫಾರಸು ಮಾಡಲಾಗುವುದು. ಐಷಾರಾಮಿ ಬಂಗಲೆಯಲ್ಲಿ ಕುಳಿತು ಟಿಕೆಟ್ ಹಂಚುವ ರಾಜಕಾರಣಕ್ಕೆ ನಾವು ಮುಂದಾಗುವುದಿಲ್ಲ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಯಡೆಹಳ್ಳಿ ಮಂಜುನಾಥ್, ಕುಣಿಗನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೇಗ್ಗಾವೆ ಪುಟ್ಟರಾಜೇಗೌಡ ಮಾತನಾಡಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ದೊಡ್ಡದೀನೆ ಮಂಜೇಗೌಡ, ಹೆಗ್ಗಾವೆ ಗೋಪಾಲಸ್ವಾಮಿ, ಭಾಗೆ ನೀಲಕಂಠಗೌಡ, ಬೆಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಭುವನಾಕ್ಷ, ಕುಣಿಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾರಾ ಮಹೇಶ್, ಪಕ್ಷದ ಒಬಿಸಿ ಮುಖಂಡ ವಡ್ಡರಳ್ಳಿ ರಾಜಣ್ಣ, ಸಾವುಲ್ ಹಮೀದ್, ನಾಗರಾಜ್, ನಿಜಾರ್, ದಿನೇಕೆರೆ ಶೇಖರ್, ಪ್ರೇಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

KPCC member Salim Kollahalli said that priority should be given to those who are active in the constituency instead of distributing tickets sitting in a luxurious bungalow.