ಚನ್ನರಾಯಪಟ್ಟಣ: ಬಸವ ಮಾಲೆ ಧರಿಸಿ ಧನುರ್ಮಾಸ ವ್ರತ ಆಚರಣೆ ಬದುಕು ಪಾವನ – ಶ್ರೀ ಶಂಭುನಾಥ ಸ್ವಾಮೀಜಿ

Sri Shambhunath Swamiji of the Adichunchanagiri Hassan branch said that if one wears a Basava garland, participates in the Dhanurmasa Puja and observes the fast, one's life will become pure.

ಚನ್ನರಾಯಪಟ್ಟಣ: ಬಸವ ಮಾಲೆ ಧರಿಸಿ ಧನುರ್ಮಾಸ ಪೂಜೆಯಲ್ಲಿ ಪಾಲ್ಗೊಂಡು ವ್ರತ ಆಚರಿಸಿದರೆ ಬದುಕು ಪಾವನವಾಗಲಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಧನುರ್ಮಾಸ ಪ್ರಯುಕ್ತ ಬಸವ ಕಳಶ ಪ್ರತಿಷ್ಠಾಪಿಸಿ, ದೇವರ ಅನುಗ್ರಹವಿದ್ದರೆ ಮಾತ್ರ ಬದುಕಿನಲ್ಲಿ ಮುಕ್ತಿ ಪಡೆಯಲು ಸಾಧ್ಯ ಎಂದು ಆಶೀರ್ವಚನ ನೀಡಿದರು.

ಶ್ರದ್ಧೆ, ಭಕ್ತಿ ಹಾಗೂ ದೃಢ ಸಂಕಲ್ಪದೊಂದಿಗೆ ಬಸವ ಮಾಲೆ ಧರಿಸಿ, ಪೂಜೆ, ಭಜನೆ, ಸ್ಮರಣೆ, ಜಪ-ತಪ ಮಾಡಿದರೆ ಪುಣ್ಯ ಲಭಿಸುವುದರ ಜೊತೆಗೆ ಆತ್ಮ ಪರಿಶುದ್ಧತೆಯೊಂದಿಗೆ ದೈವಾಂಶ ಗುಣ ಬೆಳೆಯಲಿದೆ. ದೇವರ ಪಾದದಲ್ಲಿ ನಿಮಗೆ ಮುಕ್ತಿ ಸಿಗಲಿದೆ ಎಂದು ತಿಳಿಸಿದರು.

ಆಧುನಿಕತೆಯೊಂದಿಗೆ ಶೈಕ್ಷಣಿಕ ವ್ಯವಸ್ಥೆಯು ಬೆಳೆದಂತೆಲ್ಲ ಮಾನವೀಯತೆ ಮೌಲ್ಯ ಕುಸಿಯುತ್ತಿದೆ. ಯುವ ಸಮುದಾಯವು ಹೆತ್ತವರು ಹಾಗೂ ಗುರು ಹಿರಿಯರನ್ನು ಕಡೆಗಣಿಸುತ್ತಿದೆ. ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ. ಮೌಲ್ಯಯುತ ಶಿಕ್ಷಣದ ಜೊತೆಗೆ ಸಂಸ್ಕಾರ ಸಿಗದೇ ಸಮಾಜದ ಬದಲಾವಣೆ ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.

ಸನ್ನಿಧಿಯಲ್ಲಿ ಬಸವ ಕಳಶ ಪ್ರತಿಷ್ಠಾಪಿಸುವ ಮೂಲಕ ಧನುರ್ಮಾಸ ವ್ರತಕ್ಕೆ ಚಾಲನೆ ನೀಡಲಾಗಿದ್ದು ಜನವರಿ 14 ರವರೆಗೆ ಪ್ರತಿದಿನ ಪೂಜೆ, ಭಜನೆ ಹಾಗೂ ಅನ್ನದಾಸೋಹ ನಡೆಯಲಿದೆ. ಸಾವಿರಾರು ಮಂದಿ ಭಕ್ತರು ಬಸವ ಮಾಲೆ ಧರಿಸಿ ವ್ರತದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿ ಶ್ರೀಕ್ಷೇತ್ರದಲ್ಲಿ ಬಸವ ಮಾಲೆ ಧರಿಸಿ, ಬಸವ ಕಳಶವನ್ನು ಊರಿಗೆ ತೆಗೆದುಕೊಂಡು ಹೋಗಿ ದೇಗುಲಗಳಲ್ಲಿ ಸ್ಥಾಪಿಸಿ ಒಂದು ತಿಂಗಳ ಕಾಲ ವ್ರತ ಕೈಗೊಂಡು ಮಕರ ಸಂಕ್ರಾಂತಿ ಹಬ್ಬದ ಹಿಂದಿನ ದಿನ ಸಂಜೆ ಗ್ರಾಮದೇವತೆಗಳೊಂದಿಗೆ ಬಸವ ಕಲಶ ಹೊತ್ತು ಶ್ರೀಕ್ಷೇತ್ರಕ್ಕೆ ಬಸವ ಮಾಲಾಧಾರಿಗಳು ಆಗಮಿಸಿದ್ದಾರೆ. ರಾತ್ರಿ ಪುಷ್ಕರಣಿಯಲ್ಲಿ ಚುಂಚಶ್ರೀಗಳ ತೆಪ್ಪೋತ್ಸವ ಜರುಗಿದ ನಂತರ ಬಸವ ಮಾಲೆ ವಿಸರ್ಜನೆ ಕಾರ್ಯ ನಡೆಯಲಿದೆ. ನಂತರ ಧಾರ್ಮಿಕ ವೇದಿಕೆಯಲ್ಲಿ ಚುಂಚಶ್ರೀಗಳು ಆಶೀರ್ವಚನ ನೀಡಲಿದ್ದಾರೆ ಎಂದರು.

ಬಸವ ಕಲಶ ಸ್ಥಾಪನೆ: ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ದೇಗುಲಕ್ಕೆ ಹಸಿರು ಚಪ್ಪರ ಹಾಕಲಾಗಿದ್ದು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸಂಜೆ ದೇಗುಲದ ಹಿಂಭಾಗ ಸಮೀಪದಲ್ಲಿರುವ ಮಜ್ಜನದ ಬಾವಿಯ ಕಟ್ಟೆಯ ಮೇಲೆ ಬಸವ ಕಳಶ ಪ್ರಸ್ತಾಪಿಸಿ ಮಾಲೆ ಧರಿಸಿ ಪ್ರಥಮ ಪೂಜೆ ಸಲ್ಲಿಸಿದ್ದು ಮಂಗಳವಾದ್ಯದೊಂದಿಗೆ ಬಸವ ಕಲಶವನ್ನು ಸನ್ನಿಧಿಗೆ ತಂದು ಹಸಿರು ಮಂಟಪದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಶ್ರೀಕ್ಷೇತ್ರ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಗುಡಿಗೌಡ ಪ್ರಕಾಶ್, ಅರ್ಚಕ ವೃಂದ, ಬೋರೇಗೌಡ, ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ, ಶಿಕ್ಷಕ ವೃಂದ, ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಪಾಲ್ಗೊಂಡಿದ್ದರು.

Sri Shambhunath Swamiji of the Adichunchanagiri Hassan branch said that if one wears a Basava garland, participates in the Dhanurmasa Puja and observes the fast, one’s life will become pure.