ಅರಸೀಕೆರೆ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಂತಾಪ

Leaders of various political parties, including office bearers of the Taluk Veerashaiva Lingayat Mahasabha, and office bearers of various organizations prayed for the eternal peace of the deceased's soul.

ಅರಸೀಕೆರೆ : ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಸೇರಿದಂತೆ ನಾನಾ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.

ನಗರದ ಪಿಪಿ ವೃತ್ತದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಸೇರಿದಂತೆ, ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡು ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಗೌರವ ಸಮರ್ಪಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗಂಜಿಗೆರೆ ಚಂದ್ರಶೇಖರ್ ಮಾತನಾಡಿ, ಬಹುಮುಖದ ವ್ಯಕ್ತಿತ್ವ ಹೊಂದಿದ್ದ ಶಾಮನೂರು ಶಿವಶಂಕರಪ್ಪ ಅವರು ಸಮಾಜಕ್ಕೆ ಆಸ್ತಿಯಾಗಿದ್ದರು. ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಅಪಾರವಾಗಿದೆ ಎಂದು ತಮ್ಮ ನುಡಿ ನಮನ ಸಲ್ಲಿಸಿದರು.

ಖ್ಯಾತ ವಕೀಲ ಹಾಗೂ ಜೆಡಿಎಸ್ ಮುಖಂಡ ವಿವೇಕ್ ಮಾತನಾಡಿ, ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಸಾವು ಎಂಬುದು ಕಟ್ಟಿಟ್ಟ ಬುತ್ತಿ. ಆದರೆ ಕೆಲವರು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ನೀಡುವ ಕೊಡುಗೆಯಿಂದ ಸತ್ತ ಮೇಲು ಜೀವಂತ ಇರುತ್ತಾರೆ. ಅಂತಹ ಮೇರು ವ್ಯಕ್ತಿತ್ವ ಶಾಮನೂರು ಶಿವಶಂಕಪ್ಪ ಅವರದಾಗಿತ್ತು.

ಇಂದಿನಿಂದ ಅವರು ದೈಹಿಕವಾಗಿ ನಮ್ಮೊಂದಿಗೆ ಇರದೆ ಇರುವುದು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ಸಲ್ಲಿಸಿದರು.

ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಶಿವಣ್ಣ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಒಬ್ಬ ವ್ಯಕ್ತಿಯಾಗಿರಲಿಲ್ಲ. ಸಮಾಜಕ್ಕೆ ಒಂದು ಶಕ್ತಿಯಾಗಿದ್ದರು. ಜಾತಿ ಮತ ಪಂಥ ಮೀರಿದ್ದ ಅವರ ಜೀವನ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದು ಹೇಳಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಹಿರಿಯೂರು ರೇವಣ್ಣ, ಮುಖಂಡರಾದ ಜಿವಿಟಿ ಬಸವರಾಜ್, ಬಿ ಎಂ.ಎನ್.ವಿದ್ಯಾಧರ್, ಜಯರಾಂ, ವೆಂಕಟಮುನಿ, ಸುಬ್ರಮಣ್ಯ ಬಾಬು, ಜಿಲ್ಲಾ ಕರವೇ ಉಪಾಧ್ಯಕ್ಷ ಹೇಮಂತ್ ಕುಮಾರ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್ ಜಿ ಮಧು,ನಾಗೇನ ಹಳ್ಳಿ ಸಿದ್ದಮಲ್ಲಪ್ಪ ಮೊದಲಾದವರಿದ್ದರು.

Leaders of various political parties, including office bearers of the Taluk Veerashaiva Lingayat Mahasabha, and office bearers of various organizations prayed for the eternal peace of the deceased's soul.