ಹಾಸನ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊಲೆ, ದರೋಡೆ ಹಾಗೂ ಗಾಂಜಾ, ಡ್ರಗ್ಸ್ ಮಾರಾಟ, ಜೂಜಾಟ, ಇಸ್ಪೀಟ್ ದಂಧೆ ಮೊದಲಾದ ಕಾನೂನು ಬಾಹಿರ ಚಟುವಟಿಕೆ ತಡೆಯುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು, ಕೂಡಲೇ ಎಸ್ಪಿ ಮೊಹಮ್ಮದ್ ಸುಜೀತಾ ಅವರನ್ನು ವರ್ಗಾವಣೆ ಮಾಡುವಂತೆ ಎಎಪಿ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಎಸ್ಪಿ ಅವರು ಹಾಸನಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಗಾಳಿಗೆ ತೂರಿದ್ದಾರೆ. ಜಿಲ್ಲೆಯಾದ್ಯಂತ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಗಾಂಜಾ ನಶೆಯಲ್ಲಿ ಯುವಕ ಕೊಲೆಯಾದರೂ ಇದು ಪೊಲೀಸರ ಗಮನಕ್ಕೆ ಬಂದಿಲ್ಲ, ಪೊಲೀಸ್ ಇಂಟೆಲಿಜೆನ್ಸ್ ಎಲ್ಲಿದೆ ಎಂದು ಪ್ರಶ್ನಿಸಿದರು.
ಗಾಂಜಾ ನಶೆಯಲ್ಲಿ ಯುವಕನ ಕೊಂದು ವಿಡಿಯೋ ಮಾಡಿದ ದೃಶ್ಯ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ಆದರೆ ಪೊಲೀಸರಿಗೆ ತಿಳಿಯಲು ಒಂದು ದಿನ ಬೇಕಾಯಿತು ಎಂದರೆ ಇಲಾಖೆ ಏನು ಮಾಡುತ್ತಿದೆ ಎಂದು ಕಿಡಿಕಾರಿದರು.
ಕೊಲೆ ಮಾಡಿದ ಯುವಕನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟ ಪೊಲೀಸರ ಕಣ್ಣು ತೆರೆದಿದೆ. ಇದೇನಾ ಇಂಟಲಿಜೆನ್ಸ್ ಎಂದು ಕೇಳಿದರು. ಗಾಂಜಾ, ಅಫೀಮು, ಡ್ರಗ್ಸ್ ಶಾಲಾ-ಕಾಲೇಜು ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ಸಿಗುತ್ತಿರುವುದು ಆತಂಕಕಾರಿ. ಇದನ್ನು ತಡೆಗಟ್ಟುವವರು ಯಾರು, ಎಂದು ಆಕ್ರೋಶ ಹೊರಹಾಕಿದರು.
ರಾತ್ರಿ ವೇಳೆ ಮಹಿಳೆಯರು, ಮಕ್ಕಳಿಗೆ ಸುರಕ್ಷತೆ ಇಲ್ಲವಾಗಿದೆ. ಬೈಕ್ ವ್ಹೀಲಿಂಗ್ ಪ್ರಕರಣ ಹೆಚ್ಚುತ್ತಿವೆ. ಸರಗಳ್ಳತನ, ಸುಲಿಗೆ, ನಿರಂತರ ಜೂಜಾಟ, ಇಸ್ಪೀಟ್, ಮಟ್ಕಾ ಅಟ್ಟಹಾಸ ಮೆರೆಯುತ್ತಿದೆ. ಆದರೂ ಎಸ್ಪಿ ಕಣ್ಣು ಮುಚ್ಚಿ ಕೂತಿದ್ದಾರೆ. ಆರೋಪಿಗಳನ್ನು ಬಂಧಿಸಿಲ್ಲ, ಜೂಜು ಅಡ್ಡೆ ಮೇಲೆ ದಾಳಿ ನಡೆಸಿಲ್ಲ, ಇಂತಹ ಎಸ್ಪಿ ಜಿಲ್ಲೆಗೆ ಬೇಕಿಲ್ಲ ಎಂದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದಕ್ಕಾಗಿ ದಕ್ಷ ಪೊಲೀಸ್ ಅಧಿಕಾರಿಯನ್ನು ನೇಮಿಸಬೇಕು ಎಂದು ಸರ್ಕಾರದ ಗಮನ ಸೆಳೆದರು. ಗಾಂಜಾ-ಡ್ರಗ್ಸ್ ಮಾಫಿಯಾ, ಕೊಲೆ-ದರೋಡೆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಸಂಪೂರ್ಣ ತನಿಖೆ ನಡೆಸಬೇಕು ಎಂದ ಅವರು, ನಿರಂತರವಾಗಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆ ಖಂಡಿಸಿ, ಪಕ್ಷಾತೀತವಾಗಿ ಎಲ್ಲಾ ಸಂಘ-ಸಂಸ್ಥೆಗಳು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರನ್ನು ಒಗ್ಗೂಡಿಸಿ ನಗರದಲ್ಲಿ ಶೀಘ್ರವೇ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಪ್ ಜಿಲ್ಲಾಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಮಂಜು, ಕಾರ್ಯದರ್ಶಿ ಖಾದರ್, ಕಾರ್ಯಕರ್ತೆ ಶೋಭಾ ಇದ್ದರು.
The police department has completely failed to prevent the increasing number of murders, robberies, and illegal activities like marijuana, drug sales, gambling, and ispeet rackets, prompting outrage and the immediate transfer of SP Mohammed Sujitha.










