ಸಕಲೇಶಪುರ : ಸುತ್ತೂರು ಜಾತ್ರಾ ಮಹೋತ್ಸವ ಕೇವಲ ಭಕ್ತಿಯ ಮಾತ್ರವಲ್ಲ ಜ್ಞಾನ ಮತ್ತು ಶರಣ ಸಂಸ್ಕೃತಿಯ ಮಹಾ ಭಂಡಾರ ಎಂದು ಮಲೆನಾಡು ವೀರಶೈವ ಸಮಾಜದ ಕಾರ್ಯದರ್ಶಿ ಎಡೆಹಳ್ಳಿ ಮಂಜುನಾಥ್ ಹೇಳಿದರು.
ಪಟ್ಟಣಕ್ಕೆ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಸ್ವಾಗತಿಸಿ ಮಾತನಾಡಿ, ಸಹಸ್ರ ಸಂವತ್ಸರಗಳ ಹಿಂದೆ ಕಪಿಲಾ ನದೀತೀರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ತಪಸ್ಸಿನಿಂದ ಸಂಸ್ಥಾಪಿತವಾದ ಸುತ್ತೂರು ಶ್ರೀಕ್ಷೇತ್ರದಲ್ಲಿ 2026ರ ಜನವರಿ 15ರಿಂದ 20ರವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ.
ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತು ಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೋಣಿ ವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ರಾಗಿಬೀಸುವ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಆಯೋಜಿಸಲಾಗಿವೆ. ನಾಟಕಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಗಳೂ ನಡೆಯಲಿವೆ ಎಂದರು.
ಭಾರತದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಗಳಿಗೆ ಮಠಾಧೀಶರು, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ-ರಾಜ್ಯದ ಸಚಿವರು, ಸಂಸದರು, ಶಾಸಕರು, ಕಲಾವಿದರು ಹಾಗೂ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದರು.
ಸಾಮೂಹಿಕ ವಿವಾಹ, ಕುಸ್ತಿ ಪಂದ್ಯಾವಳಿ, ರಂಗೋಲಿ, ಗಾಳಿಪಟ ಮತ್ತು ಚಿತ್ರಕಲೆ ಸ್ಪರ್ಧೆಗಳ ವಿವರಗಳಿಗೆ ಸುತ್ತೂರು ಶ್ರೀಕ್ಷೇತ್ರ ಅಥವಾ ಮೈಸೂರು ಜೆಎಸ್ಎಸ್ ಮಹಾವಿದ್ಯಾಪೀಠದ ಜಾತ್ರಾ ಕಚೇರಿಯಲ್ಲಿ ಸಂಪರ್ಕಿಸಬಹುದು. ಪೂಜಾ ಕೈಂಕರ್ಯಗಳಿಗೆ ಆಸಕ್ತಿ ಇರುವ ಭಕ್ತರಿಗೂ ಇದೇ ಕಚೇರಿಯಲ್ಲಿ ಮಾಹಿತಿ ಲಭ್ಯ ಎಂದು ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ತಾಲ್ಲೂಕು ಅಧ್ಯಕ್ಷೆ ಕೋಮಲ ದಿನೇಶ್ ಮಾತನಾಡಿ, ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಸಮಾಜಸೇವಾ ಕಾರ್ಯಗಳು ಯುವಕರಿಗೆ ಮಾದರಿಯಾಗಿವೆ ಎಂದು ಹೇಳಿದರು.
ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಭಕ್ತರಿಗೆ ಕೋರಿಕೊಳ್ಳುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಕೌಡಹಳ್ಳಿ ಲೋಹಿತ್, ಚಂದ್ರಶೇಖರ್, ಸುರೇಶ್, ಗಾಯತ್ರಿ, ರೇಖಾ ಸುರೇಶ್, ಚಂದ್ರಶೇಖರ್, ಜೆಎಸ್ಎಸ್ ವಿದ್ಯಾ ಸಂಸ್ಥೆಯ ರೇಣುಕಾರಾಧ್ಯ, ಶಿವಕುಮಾರ್, ನಂಜುಂಡಸ್ವಾಮಿ, ದಿನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Edehalli Manjunath, secretary of the Malenadu Veerashaiva Samaj, said that the Suttur Jatra Mahotsav is not only a great repository of devotion but also of knowledge and a culture of surrender.










