ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಗ್ರಾಮ ಸಮೀಪ ಲಾರಿ ಭಾರೀ ಹೊಂಡದಲ್ಲಿ ಸಿಲುಕಿದ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು.
ಮಂಗಳೂರಿನಿಂದ ಗೂಡ್ಸ್ ತುಂಬಿಕೊಂಡು ಬೆಂಗಳೂರಿನತ್ತ ಸಾಗುತ್ತಿದ್ದ ಲಾರಿ, ದೋಣಿಗಾಲ್ ಸಮೀಪದ ಕಿರಿದಾದ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿದ್ದ ಭಾರೀ ಹೊಂಡದಲ್ಲಿ ಸಿಲುಕಿಕೊಂಡಿತ್ತು. ಮುಂದೆ ಚಲಿಸಲು ಆಗದೆ ನಿಂತ ಲಾರಿಯಿಂದ ಇತರೆ ವಾಹನಗಳು ಸಾಗಲಾರದೆ ಬೆಳಿಗ್ಗೆ 11ರಿಂದ 12 ಗಂಟೆಯವರೆಗೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮಂಗಳೂರು–ಬೆಂಗಳೂರು ಮಾರ್ಗದ ವಾಹನಗಳನ್ನು ಕಪ್ಪಳಿ ಗ್ರಾಮದ ಮೂಲಕ ಹಾಗೂ ಬೆಂಗಳೂರು–ಮಂಗಳೂರು ಮಾರ್ಗದ vozಮಾನಗಳನ್ನು ಸುಬ್ರಮಣ್ಯ ರಸ್ತೆಯ ಮೂಲಕ ತಿರುಗಿಸಿ ಸಂಚಾರಕ್ಕೆ ಅವಕಾಶ ಮಾಡಿ, ವಾಹನ ದಟ್ಟಣೆಯನ್ನು ನಿಯಂತ್ರಿಸಿದರು. ನಂತರ ಕ್ರೇನ್ ಬಳಸಿ ಲಾರಿಯನ್ನು ಹೊಂಡದಿಂದ ಹೊರತೆಗೆದ ನಂತರ ಸಂಚಾರ ಸುಗಮಗೊಂಡಿತು.
ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ತಾಲೂಕಿನ ದೊಡ್ಡತಪ್ಪಲೆ ಹಾಗೂ ದೋಣಿಗಾಲ್ ಗ್ರಾಮಗಳ ನಡುವೆ ಸುಮಾರು ಒಂದು ಕಿಮೀ ಭಾಗದಲ್ಲಿ ಬಾಕಿಯಿದ್ದು, ಈ ಭಾಗದ ರಸ್ತೆ ತುಂಬಾ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದೆ. ಮೇಲೇಳಿರುವ ಕಲ್ಲುಗಳು ವಾಹನಗಳ ತಳಭಾಗಕ್ಕೆ ತಗುಲುತ್ತಿರುವುದರಿಂದ ಹಲವಾರು ವಾಹನಗಳು ಕೆಟ್ಟು ನಿಲ್ಲುವ ಘಟನೆಗಳು ಸಂಭವಿಸುತ್ತಿವೆ.
ಕಾಮಗಾರಿ ಮುಗಿಯುವವರೆಗೆ ಹೆದ್ದಾರಿಯನ್ನು ದುರಸ್ತಿ ಮಾಡಬೇಕು ಎಂಬ ಸಾರ್ವಜನಿಕರ ಬೇಡಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕಾಮಗಾರಿ ಪೂರ್ಣಗೊಂಡ ನಂತರವೂ ದೋಣಿಗಾಲ್ ಸಮೀಪದ 100 ಮೀಟರ್ ರಸ್ತೆ ಒಂದು ಬದಿ ಕುಸಿದಿರುವುದರಿಂದ ಆ ಭಾಗದಲ್ಲಿ ಏಕಪಥ ರಸ್ತೆ ಮಾತ್ರ ಸಾಧ್ಯ ಎಂದು ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ.










