- Bengaluru|ಬೆಂಗಳೂರು: ಜಿಯೋ ಸಿಮ್ ಅನ್ನು ಏರ್‌ಟೆಲ್‌ಗೆ ಪೋರ್ಟ್ ಮಾಡಲು ತಂದೆ ಅನುಮತಿ ನೀಡದ ವಿಚಾರವೇ ತೀವ್ರ ಕೋಪಕ್ಕೆ ಕಾರಣವಾಗಿ, ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ತನ್ನ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂಬ ಅಚ್ಚರಿಯ ಮಾಹಿತಿ ಬೆಂಗಳೂರಿನ ಡಬಲ್ ಮರ್ಡರ್ ಪ್ರಕರಣದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯು ಮಾನಸಿಕ ಅಸ್ವಸ್ಥನಲ್ಲ, ಮಾನಸಿಕವಾಗಿ ಆರೋಗ್ಯವಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದ್ದಾರೆ.
ಪೊಲೀಸರ ಪ್ರಕಾರ, 33 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ರೋಹನ್ ಚಂದ್ರ ಈ ವರ್ಷದ ಫೆಬ್ರವರಿಯಲ್ಲಿ (bengaluru) ಬೆಂಗಳೂರಿನ ವಿಜ್ಞಾನನಗರದ ತನ್ನ ನಿವಾಸದಲ್ಲಿ ತಂದೆ ನವೀನ್ ಚಂದ್ರ ಭಟ್ (ನಿವೃತ್ತ ನೌಕಾಪಡೆ ಕ್ಯಾಪ್ಟನ್) ಹಾಗೂ ತಾಯಿ ಶ್ಯಾಮಲಾ ಭಟ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದನು. ಈ ಘಟನೆ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು.
ಪ್ರಕರಣದ ಬಳಿಕ ಆರೋಪಿಗೆ ಸ್ಕಿಜೋಫ್ರೇನಿಯಾ ಅಥವಾ ಇತರ ಮಾನಸಿಕ ಸಮಸ್ಯೆಗಳಿವೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು. ಆದರೆ ತನಿಖೆ ನಡೆಸಿದ ಪೊಲೀಸರು ಆರೋಪಿಯ ವೈದ್ಯಕೀಯ ಹಾಗೂ ಮಾನಸಿಕ ಸ್ಥಿತಿಯನ್ನು ಪರಿಶೀಲಿಸಿದಾಗ ಆತ ಮಾನಸಿಕ ಅಸ್ವಸ್ಥನಲ್ಲ ಎಂಬುದು ಗೊತ್ತಾಗಿದೆ.
ಮೂಲಗಳ ಪ್ರಕಾರ, ಮೊಬೈಲ್ ಸಂಖ್ಯೆಯನ್ನು ಜಿಯೋ ನೆಟ್‌ವರ್ಕ್‌ನಿಂದ ಏರ್‌ಟೆಲ್‌ಗೆ ಪೋರ್ಟ್ ಮಾಡುವ ವಿಚಾರವಾಗಿ ತಂದೆ-ಮಗನ ನಡುವೆ ಪದೇಪದೇ ವಾಗ್ವಾದ ನಡೆಯುತ್ತಿತ್ತು. ಇದೇ ವಿಚಾರ ಕೊನೆಗೆ ತೀವ್ರ ಘರ್ಷಣೆಗೆ ತಿರುಗಿ, ಕೋಪಗೊಂಡ ರೋಹನ್ ತನ್ನ ಪೋಷಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸಾಮಾನ್ಯವಾಗಿ ಸಣ್ಣ ವಿಷಯವೆಂದು ಪರಿಗಣಿಸುವ ಮೊಬೈಲ್ ನೆಟ್‌ವರ್ಕ್ ಬದಲಾವಣೆಯ ವಿವಾದವೇ ಇಂತಹ ಭೀಕರ ದುರಂತಕ್ಕೆ ಕಾರಣವಾಗಿರುವುದು ತನಿಖಾಧಿಕಾರಿಗಳನ್ನೂ ಬೆಚ್ಚಿಬೀಳಿಸಿದೆ. ಪ್ರಕರಣದ ಕುರಿತು ಪೊಲೀಸರು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ.










