ಚನ್ನರಾಯಪಟ್ಟಣ: ಗುರುವಿನ ಮಾರ್ಗದರ್ಶನವಿಲ್ಲದೆ ಬದುಕಿನ ಗುರಿ ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಕೊನೆಯ ದಿನ ಶ್ರೀ ಮಠದ ಹಿರಿಯ ಸದ್ಗುರುಗಳ ಪುಣ್ಯರಾಧನೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಗುರುವಿಲ್ಲದೆ ಅರಿವಿಲ್ಲ ಎಂದು ಆಶಿರ್ವಚನ ನೀಡಿದರು.
ಮನುಷ್ಯನು ಅದೆಷ್ಟೇ ಹಣ-ಆಸ್ತಿ ಸಂಪಾದಿಸಿದರೂ ಜ್ಞಾನವನ್ನು ಸಂಪಾದಿಸದಿದ್ದರೆ ಎಲ್ಲವೂ ವ್ಯರ್ಥವಾಗಲಿದೆ. ಭಕ್ತಿ, ಶ್ರದ್ಧೆ, ಹಾಗೂ ವಿನಯತೆಯಿಂದ ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಜೀವನದ ದಡ ಸೇರುವುದರ ಜೊತೆಗೆ ಬದುಕಿನಲ್ಲಿ ಮುಕ್ತಿ ಪಡೆಯಬಹುದು ಎಂದರು.
ಹಿರಿಯರಿಲ್ಲದ ಮನೆ ಗುರುವಿಲ್ಲದ ಬದುಕು ನಿಂತ ನೀರಿನಂತೆ. ಹಣ-ಆಸ್ತಿ ಹಾಗೂ ಐಶ್ವರ್ಯದಿಂದ ಯಾವುದೇ ಸಂಬಂಧವನ್ನು ಸಂಪಾದಿಸಲು ಹಾಗೂ ಸುಭದ್ರವಾಗಿ ಕಟ್ಟಲು ಸಾಧ್ಯವಿಲ್ಲ. ಸನ್ಮಾರ್ಗದಲ್ಲಿ ನಡೆದರೆ ಸಾವಿನ ಕೊನೆಯ ತನಕ, ಸ್ವರ್ಗದ ಬಾಗಿಲಿನ ವರೆಗೂ ನೀನು ಮಾಡಿದ ಪುಣ್ಯ ನಿನ್ನೊಂದಿದೆ ಬರಲಿದೆ ಎಂದು ಭಕ್ತರಿಗೆ ಕಿವಿಮಾತು ಹೇಳಿದರು.
ಅದೆಷ್ಟೋ ಜನ್ಮಗಳನ್ನು ಪಡೆದು ಕರ್ಮ ಕಾರ್ಯಗಳನ್ನು ಮುಗಿಸಿದ ಬಳಿಕವೇ ಅಪರೂಪದ ಮನುಷ್ಯನ ಜನ್ಮ ಸಿಗಲಿದೆ. ಆಡಂಬರದ ಜೀವನ ಸಡೆಸುವ ಸಲುವಾಗಿ ಸಮಯ ವ್ಯರ್ಥ ಮಾಡಿಕೊಳ್ಳುವುದರ ಬದಲು ದಾನ, ಧರ್ಮ ಹಾಗೂ ಪುಣ್ಯ ಕಾರ್ಯಗಳಿಗೆ ಬದುಕನ್ನು ವಿನಿಯೋಗ ಮಾಡಿಕೊಂಡು ಸಾರ್ಥಕತೆ ಪಡಿಸಿಕೊಳ್ಳಬೇಕು ಎಂದರು.
ಮಠದ ಹಿರಿಯ ಶ್ರೀಗಳಾದ ಪರಮಪೂಜ್ಯ ಸದ್ಗುರು ಶ್ರೀ ಚಿಕ್ಕಯ್ಯ ಪರದೇಶಿ ಮಹಾಸ್ವಾಮೀಜಿ, ಶ್ರೀ ನಂಜಯ್ಯ ಪರದೇಶಿ ಮಹಾಸ್ವಾಮೀಜಿ ಹಾಗೂ ಶ್ರೀ ರಾಮಯ್ಯ ಪರದೇಶಿ ಮಹಾಸ್ವಾಮೀಜಿಯವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಕುಂದೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.










