11.1 C
Munich
Home ಕ್ರೈಮ್‌ ಹಾಸನ: ರಾತ್ರಿ ಊಟಕ್ಕೆ ಗೆಂಡೆಕಟ್ಟೆ ಫಾರೆಸ್ಟ್ ಐಬಿಗೆ ಹೋಗಿದ್ದ ಎಸಿಎಫ್ ಎಳೆದೊಯ್ದದವರು ಯಾರು? ಎಮರ್ಜೆನ್ಸಿ ಕಾರ್ಯಾಚರಣೆ...

ಹಾಸನ: ರಾತ್ರಿ ಊಟಕ್ಕೆ ಗೆಂಡೆಕಟ್ಟೆ ಫಾರೆಸ್ಟ್ ಐಬಿಗೆ ಹೋಗಿದ್ದ ಎಸಿಎಫ್ ಎಳೆದೊಯ್ದದವರು ಯಾರು? ಎಮರ್ಜೆನ್ಸಿ ಕಾರ್ಯಾಚರಣೆ ಆರಂಭಿಸಿದ ಬಡಾವಣೆ ಠಾಣೆ ಪೊಲೀಸರಿಗೆ ಸಿಕ್ಕಿದ್ದೇನು?

ಹಾಸನ: ನಗರ ಹೊರವಲಯದ ಗೆಂಡೆಕಟ್ಟೆ ಫಾರೆಸ್ಟ್ ಐಬಿಯಿಂದ ಎಸಿಎಫ್ ಒಬ್ಬರನ್ನು ಅಪರಿಚಿತರು ಎಳೆದೊಯ್ದಿದ್ದಾರೆ ಎಂಬ ಹಿರಿಯ ಅರಣ್ಯ ಅಧಿಕಾರಿಗಳ ಆತಂಕಕಾರಿ ಮಾಹಿತಿ ಆಧರಿಸಿ ಹೈ ಅಲರ್ಟ್ ಆದ ಪೊಲೀಸರು, ಅಧಿಕಾರಿಯ ಜಾಡು ಹಿಡಿದು‌ ಹೋಗಿ ಬೆಸ್ತುಬಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಗೂಗಲ್ ಪೇ ಮೂಲಕ ಲಂಚ ಸ್ವೀಕರಿಸಿದ ಕಾರಣಕ್ಕಾಗಿ ಲೋಕಾಯುಕ್ತ ಪೊಲೀಸರ ವಶದಲ್ಲಿ ಪತ್ತೆಯಾದ ಅಧಿಕಾರಿ ಕಿಡ್ನಾಪ್ ಆಗಿಲ್ಲ, ಬದಲಿಗೆ ಮಾಡಿದ ತಪ್ಪಿಗೆ ಸಿಕ್ಕಿಬಿದ್ದಿದ್ದಾರೆ ಎನ್ನುವುದು ಖಚಿತವಾಗಿದೆ.

ಪ್ರಕರಣವೊಂದರಲ್ಲಿ ಶೀಘ್ರ ಚಾರ್ಜ್‌ಶೀಟ್ ಸಲ್ಲಿಕೆಗಾಗಿ ಗೂಗಲ್ ಪೇ ಮೂಲಕ ಲಂಚ ಸ್ವೀಕರಿಸಿದ್ದ ಅರಣ್ಯ ಸಂಚಾರಿ ದಳದ ಎಸಿಎಫ್ ಸತೀಶ್‌ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ಗೂಗಲ್ ಪೇ ಮೂಲಕ ಪಡೆದ ಹಣವೇ ಅಧಿಕಾರಿಯ “ಮಾರಕ ಸಾಕ್ಷಿ”ಯಾಗಿ ಪರಿಣಮಿಸಿದೆ.

ಅರಸೀಕೆರೆ ತಾಲ್ಲೂಕಿನ ಯಾದಪುರ ಗ್ರಾಮದ ಗಿಳಿಶಾಸ್ತ್ರ ಹೇಳುವ ಜ್ಯೋತಿಷಿ ಅಖಿಲೇಶ್ ಅವರಿಂದ ಸತೀಶ್‌ ಅವರು ₹15,000 ಲಂಚ ಬೇಡಿಕೆ ಇಟ್ಟಿದ್ದರು. ನವೆಂಬರ್ 19ರಂದು ಮೊದಲ ಹಂತವಾಗಿ ₹5,000 ಗೂಗಲ್ ಪೇ ಮೂಲಕ ಪಡೆದಿದ್ದರೂ, ನಿನ್ನೆ ಉಳಿದ ₹10,000 ಗೂಗಲ್ ಪೇ ಮೂಲದ ಸ್ವೀಕರಿಸಿದ ಕ್ಷಣದಲ್ಲೇ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದರು.

ಹಾಸನ ಹೊರವಲಯದ ಗೆಂಡೆಕಟ್ಟೆ ಫಾರೆಸ್ಟ್‌ನ ಐಬಿಯಲ್ಲಿ ಇದ್ದ ಸತೀಶ್‌ ಅವರನ್ನು ಲೋಕಾಯುಕ್ತ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಅವರ ನೇತೃತ್ವದ ತಂಡ ಬಂಧಿಸಿದೆ.

ಅರ್ಧರಾತ್ರಿ ‘ಹೈಡ್ರಾಮ’: ಅಧಿಕಾರಿಗಾಗಿ ಪೊಲೀಸರ ಹುಡುಕಾಟ

ಎಸಿಎಫ್ ಸತೀಶ್‌ ಅವರನ್ನು ಲೋಕಾಯುಕ್ತ ಪೊಲೀಸರು ಐಬಿಯಿಂದ ಕರೆದೊಯ್ದ ನಂತರ, ಸ್ಥಳದಲ್ಲಿದ್ದ ಅರಣ್ಯ ಸಿಬ್ಬಂದಿಗೆ ಇದು ಅಪರಿಚಿತರಿಂದ ಅಪಹರಣವಾದಂತೆ ತೋರಿದ ಕಾರಣ ದೊಡ್ಡ ಗೊಂದಲ ಉಂಟಾಯಿತು.

ಸ್ಥಳದಲ್ಲಿದ್ದ ಫಾರೆಸ್ಟ್‌ ಗಾರ್ಡ್‌ಗಳು “ಅಪರಿಚಿತರು ನಮ್ಮ ಅಧಿಕಾರಿಯನ್ನು ಕರೆದೊಯ್ದಿದ್ದಾರೆ” ಎಂದು ಆರ್‌ಎಫ್‌ಓ ವಿಶ್ವನಾಥ್ ಅವರಿಗೆ ಮಾಹಿತಿ ನೀಡಿದರು.

ಆರ್‌ಎಫ್‌ಓ ವಿಶ್ವನಾಥ್, ಹಲವು ಬಾರಿ ಸತೀಶ್ ಅವರಿಗೆ ಕರೆ ಮಾಡಿದರೂ ಫೋನ್ ಕರೆ ಸ್ವೀಕರಿಸದ ಕಾರಣ ಗಾಬರಿ ಹೆಚ್ಚಿತು.

ಬಡಾವಣೆ ಪೊಲೀಸ್ ಠಾಣೆಗೆ ಸುದ್ದಿ ನೀಡಲಾಯಿತು. ಪೊಲೀಸರು ಕೂಡ ಸ್ಥಳಕ್ಕೆ ಬಂದು ಶೋಧ ಕಾರ್ಯ ನಡೆಸಿದರು.

ಫೋನ್‌ ಟವರ್‌ ಲೊಕೇಷನ್ ಆಧರಿಸಿ ಪೊಲೀಸರು ಹುಡುಕಾಟ ಮುಂದುವರಿಸಿದರು, ಲೊಕೇಷನ್‌ ಜಿಲ್ಲಾಧಿಕಾರಿ ಕಚೇರಿ ಪ್ರದೇಶವನ್ನು ತೋರಿಸಿತು. ಬಳಿಕ ಡಿಸಿ ಕಚೇರಿ ಮೇಲ್ಮಹಡಿಯಲ್ಲಿ ಇರುವ ಲೋಕಾಯುಕ್ತ ಠಾಣೆಯಲ್ಲೇ ಸತೀಶ್‌ ಇರುವುದು ಪೊಲೀಸರಿಗೆ ಗೊತ್ತಾಯಿತು.

ಬಡಾವಣೆ ಠಾಣೆ ಪೊಲೀಸರು ನಂತರ ಐಬಿಗೆ ಹಿಂತಿರುಗಿದರು, ಈ ಮೂಲಕ ಘಟನೆಯ “ಹೈ ಡ್ರಾಮಾ”ಕ್ಕೆ ತೆರೆ ಬಿತ್ತು.

error: Content is protected !!