11.8 C
Munich
Home News ಹಾಸನ: ರೈತರ ಬೇಡಿಕೆ ಈಡೇರಿಕೆಗೆ 2ನೇ ದಿನವೂ ಮುಂದುವರಿದ ಪ್ರತಿಭಟನೆ

ಹಾಸನ: ರೈತರ ಬೇಡಿಕೆ ಈಡೇರಿಕೆಗೆ 2ನೇ ದಿನವೂ ಮುಂದುವರಿದ ಪ್ರತಿಭಟನೆ

The struggle waged by farmers and leaders demanding the fulfillment of their various demands has continued for the second day.

ಹಾಸನ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಹಾಗೂ ಮುಖಂಡರು ನಡೆಸುತ್ತಿರುವ ಹೋರಾಟ 2ನೇ ದಿನವೂ ಮುಂದುವರಿದಿದೆ. ಕಳೆದ 4 ವರ್ಷಗಳಿಂದ ಅತಿವೃಷ್ಟಿ ಹಾಗೂ ಬರಗಾಲದಿಂದ ತತ್ತರಿಸುತ್ತಿರುವ ರೈತರು, ಇದೀಗ ಕಳಪೆ ಮೆಕ್ಕೆಜೋಳ ಬೀಜದ ಪರಿಣಾಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಲಸೋಲ ಮಾಡಿ ಎರಡೆರಡು ಬಾರಿ ಬಿತ್ತನೆ ಮಾಡಿದರೂ, ಬಂಡವಾಳ ವಾಪಸ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದಿಕ್ಕುತೋಚದ ರೈತರು ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ ಎಂದು ಹಿರಿಯ ಮುಖಂಡ ಕಣಗಾಲ್ ಮೂರ್ತಿ ಆರೋಪಿಸಿದರು.

ರೈತ ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯ ಗ್ಯಾರಂಟಿ ರಾಮಣ್ಣ ಮಾತನಾಡಿ, ರೈತರಿಗೆ ಆತ್ಮಸ್ಥೈರ್ಯ ತುಂಬಿ ರಕ್ಷಣೆ ನೀಡುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕರ್ತವ್ಯವಾಗಿದ್ದರೂ, ಸರ್ಕಾರ ರೈತರ ಸಮಾಧಿಗಳ ಮೇಲೆ ಮಹಲ್ ಕಟ್ಟುವ ನೀತಿ ಅನುಸರಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಬೆಳೆದ ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ನಿಗದಿಪಡಿಸಿದ ದರಕ್ಕೂ ಕಡಿಮೆ ಮಾರಾಟವಾಗುತ್ತಿದೆ. ಬೆಲೆ ಕುಸಿತದ ಸಂದರ್ಭದಲ್ಲಿ ಖರೀದಿ ಕೇಂದ್ರ ತೆರೆಯಬೇಕಿದ್ದರೂ, ಇನ್ನೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆ ಹೈನುಗಾರಿಕೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಪಶು ಆಹಾರಕ್ಕೆ ಅಗತ್ಯವಾಗಿರುವ ಮೆಕ್ಕೆಜೋಳ ಕೆ.ಎಂ.ಎಫ್. ಹೊರ ರಾಜ್ಯಗಳಿಂದ ದಲ್ಲಾಳಿಗಳ ಮುಖಾಂತರ ತರಿಸಿಕೊಳ್ಳುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ರೈತರಿಂದಲೇ ಮೆಕ್ಕೆಜೋಳ ಖರೀದಿ ಮಾಡುವ ಬದಲಿಗೆ ಹೊರಜಿಲ್ಲೆ, ಹೊರರಾಜ್ಯಗಳ ಅವಲಂಬನೆ ಮುಂದುವರೆದಿದೆ. ಇದನ್ನು ತಕ್ಷಣ ನಿಲ್ಲಿಸಿ, ಸ್ಥಳೀಯ ರೈತರಿಗೆ ಆದ್ಯತೆಯಾಗಿ ಖರೀದಿ ಪ್ರಾರಂಭಿಸಬೇಕೆಂದು ಆಶ್ರಯವಾಗಿದೆ ಎಂದರು.

ಕಳಪೆ ಬೀಜದಿಂದ ಉಂಟಾದ ನಷ್ಟವನ್ನು ಸರಕಾರ ಪರಿಹರಿಸಬೇಕು, ಹೊರರಾಜ್ಯ ಮೆಕ್ಕೆಜೋಳ ಆಮದು ನಿಲ್ಲಿಸಬೇಕು, ಹಾಗೂ ತಕ್ಷಣ ಕೇಂದ್ರ ತೆರೆಯುವಂತೆ ಆಗ್ರಹಿಸಿ, ರೈತರು ಹಗಲು-ರಾತ್ರಿ ನಿರಂತರ ಧರಣಿಗೆ ಆರಂಭಿಸಿರುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಬಳ್ಳೂರು ಉಮೇಶ್, ಬಿಟ್ಟಗೌಡನಹಳ್ಳಿ ಮಂಜು, ಮರ್ಕುಲಿ ಪ್ರಕಾಶ್, ಬೂವನೇಶ್, ಜಗದೀಶ್, ಶಿವಕುಮಾರ್, ಬೂಮೇಶ್ ಇತರರು ಉಪಸ್ಥಿತರಿದ್ದರು.

error: Content is protected !!